ಮನೆ ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ರೂ ಸರಿ ಹೆತ್ತವರು ಕೆಂಡಾಮಂಡಲವಾಗುತ್ತಾರೆ. ನಂತರ ಕಠಿಣ ಶಿಕ್ಷೆ ನೀಡಿ ಬೈದು ಬುದ್ಧಿ ಹೇಳುತ್ತಾರೆ. ಆದ್ರೆ ಅಜ್ಜ-ಅಜ್ಜಿಯಂದಿರು ಹಾಗಲ್ಲ, ತಮ್ಮ ಮೊಮ್ಮಕ್ಕಳು ಎಷ್ಟೇ ದೊಡ್ಡ ತಪ್ಪು ಮಾಡಿದ್ರೂ ಸರಿ ಅದನ್ನು ಕ್ಷಮಿಸಿ ನನ್ನ ಮೊಮ್ಮಗ ಮುತ್ತು ರತ್ನ ಎನ್ನುತ್ತಾ ಮೊಮ್ಮಕ್ಕಳನ್ನು ಮುದ್ದಾಡುತ್ತಾರೆ. ಇದೇ ಕಾರಣಕ್ಕೆ ಮೊಮ್ಮಕ್ಕಳಿಗೆ ತಮ್ಮ ಅಜ್ಜ ಅಜ್ಜಿಯರೆಂದರೆ ಪಂಚಪ್ರಾಣ. ಇದೀಗ ಅಜ್ಜಿ-ಮೊಮ್ಮಗನ ಪ್ರೀತಿ ಬಾಂಧವ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, 5 ವರ್ಷಗಳ ಬಳಿಕ ಜೈಲಿನಿಂದ ಮೊಮ್ಮಗನನ್ನು ಕಂಡು ಆತ ಜೈಲಿಗೆ ಹೋಗಿ ಬಂದವನು ಎಂದು ಕೋಪ ಮಾಡಿಕೊಳ್ಳದೆ, ವರ್ಷಗಳ ಬಳಿಕ ಬಂದ ಮೊಮ್ಮಗನ್ನು ಬಿಗಿದಪ್ಪಿ ಮುದ್ದಾಡಿದ್ದಾರೆ.
ಹಿಮಾಂಶು (@himanshu_drall_01) ಎಂಬವರು ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 5 ವರ್ಷಗಳ ಬಳಿಕ ತಿಹಾರ್ ಜೈಲಿನಿಂದ ಹೊರ ಬಂದ ಮೊಮ್ಮಗನ್ನು ಕಂಡು ಅಜ್ಜಿ ಭಾವುಕರಾಗಿರುವ ದೃಶ್ಯವನ್ನು ಕಾಣಬಹುದು. ಯಾವುದೋ ತಪ್ಪಿಗೆ ಜೈಲು ಪಾಲಾಗಿದ್ದ ಯುವಕನೊಬ್ಬ ಶಿಕ್ಷೆಯನ್ನು ಮುಗಿಸಿ ಜೈಲಿನಿಂದ ಹೊರ ಬರುತ್ತಾರೆ. ನಂತರ ಮನೆಗೆ ಬಂದ ಆತ ಸೀದಾ ತಮ್ಮ ಪ್ರೀತಿಯ ಅಜ್ಜಿಯನ್ನು ಕಾಣಲು ಹೋಗುತ್ತಾನೆ. ಮಂಚದ ಮೇಲೆ ಮಲಗಿದ್ದ ಅಜ್ಜಿ ತನ್ನ ಮೊಮ್ಮಗನನ್ನು ಕಂಡು ಅಯ್ಯೋ ನನ್ನ ಬಂಗಾರ ಬಂದ್ಯಾ ಎಂದು ಖುಷಿಯಲ್ಲಿ ಮೊಮ್ಮಗನ್ನು ಮುದ್ದಾಡಿದ್ದಾರೆ.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 7.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಕೆಲವರು ಇದೇನು ಮೊಮ್ಮಗ ವಿದೇಶದಲ್ಲಿದ್ದು ಏನೋ ಸಾಧನೆ ಮಾಡಿ ಬಂದಂತೆ ಖುಷಿ ಪಡುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡಿದರೆ, ಇನ್ನೂ ಅನೇಕರು ಅಜ್ಜಿ ಮೊಮ್ಮಗನ ಈ ಸುಂದರ ಬಾಂಧವ್ಯವನ್ನು ಕಂಡು ಭಾವುಕರಾಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ