ಗುಜರಿಯಿಂದ ₹ 500 ಕೊಟ್ಟು ಖರೀದಿಸಿದ್ದ ಕುರ್ಚಿ ಹರಾಜಾಗಿದ್ದು ಬರೋಬ್ಬರಿ ₹ 16 ಲಕ್ಷಕ್ಕೆ! ಅಂಥದ್ದೇನಿತ್ತು ಅದರಲ್ಲಿ?
ಬ್ರಿಟನ್ನ ಮಹಿಳೆಯೋರ್ವರು ಗುಜರಿ ಅಂಗಡಿಯಿಂದ ₹ 500 ಕೊಟ್ಟು ಒಂದು ಕುರ್ಚಿ ಖರೀದಿಸಿದ್ದರು. ಆದರೆ ಅದರ ಅಸಲಿ ಬೇರೆಯೇ ಇತ್ತು ! ಇದೆಲ್ಲಾ ತಿಳಿದಿದ್ದು ಹೇಗೆ? ಆಮೇಲೇನಾಯ್ತು? ಇಲ್ಲಿದೆ ಕುತೂಹಲಕರ ಸಮಾಚಾರ.
ಎಲ್ಲವುಗಳಿಗೂ ಅವುಗಳದ್ದೇ ಆದ ಮೌಲ್ಯವಿರುತ್ತದೆ. ಏನಕ್ಕೂ ಪ್ರಯೋಜನವಿಲ್ಲ ಎಂದು ಅಂದುಕೊಂಡಿದ್ದು, ಕೆಲ ಸಮಯದ ನಂತರ ಅತ್ಯಂತ ಮೌಲ್ಯಯುತವಾದ ವಸ್ತುವಾಗಬಹುದು. ಆದರೆ ಇದು ಸಾಧ್ಯವಾಗುವುದು ನಾವು ವಸ್ತುವಿನ ನಿಜವಾದ ಮೌಲ್ಯ ಅರಿತಾಗ ಮಾತ್ರ! ಇದಕ್ಕೆ ಉದಾಹರಣೆಯೆಂಬಂತೆ ನೈಜ ಘಟನೆಯೊಂದು ಇಲ್ಲಿದೆ. ಬ್ರಿಟನ್ (UK) ಪೂರ್ವ ಎಸೆಕ್ಸ್ನ ಬ್ರೈಟನ್ನ ಮಹಿಳೆಯೋರ್ವರು ಗುಜರಿ ಅಂಗಡಿಯಿಂದ (Junk Shop) 5 ಯೂರೋ ಅಂದರೆ ಭಾರತೀಯ ಕರೆನ್ಸಿಯಲ್ಲಿ ₹ 500 ಕೊಟ್ಟು ಒಂದು ಕುರ್ಚಿಯನ್ನು (Chair) ಖರೀದಿಸಿದ್ದರು. ಆದರೆ ನಂತರದ ಹರಾಜಿನಲ್ಲಿ ಆ ಕುರ್ಚಿ ಬರೋಬ್ಬರಿ 16,250 ಯೂರೋ ಅರ್ಥಾತ್ ಸುಮಾರು 16.4 ಲಕ್ಷ ರೂಗಳಿಗೆ ಸೇಲ್ ಆಗಿದೆ. ಆ ಕುರ್ಚಿಯಲ್ಲಿ ಏನಿತ್ತು? ಆ ಮಹಿಳೆಗೆ ಕುರ್ಚಿಯ ವಿಶೇಷತೆ ತಿಳಿದ ಬಗೆ ಹೇಗೆ? ಇಲ್ಲಿದೆ ಉತ್ತರ.
ಬ್ರಿಟನ್ನ ಆ ಮಹಿಳೆ ಗುಜರಿ ಅಂಗಡಿಯಿಂದ ಕುರ್ಚಿ ಖರೀದಿಸುವಾಗ ಆ ಕುರ್ಚಿ ಮೌಲ್ಯಯುತವಾದ ವಿನ್ಯಾಸವನ್ನು ಹೊಂದಿದೆ ಎಂಬ ಸಂಗತಿ ತಿಳಿದಿರಲಿಲ್ಲ. ಆದರೆ ಅದನ್ನು ಖರೀದಿಸಿದ ಮಹಿಳೆ ಓರ್ವ ಮೌಲ್ಯಮಾಪಕನಿಗೆ ಕುರ್ಚಿಯ ಮೌಲ್ಯವನ್ನು ಅಳೆಯಲು ಹೇಳಿದ್ದಾರೆ. ಆ ಕುರ್ಚಿ 20ನೇ ಶತಮಾನದ ಪೂರ್ವ ಭಾಗದ್ದೆಂಬ ವಿಚಾರ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಬರೀ ಹಳೆಯದ್ದಾಗಿದ್ದರೆ ಆ ಕುರ್ಚಿಗೆ ಅಷ್ಟು ಬೆಲೆ ಬರುತ್ತಿತ್ತೋ ಇಲ್ಲವೋ. ಆದರೆ ಆ ಕುರ್ಚಿ ತನ್ನದೇ ಆದ ಇತಿಹಾಸ ಹೊಂದಿತ್ತು. ಆಸ್ಟ್ರಿಯಾ ದೇಶದ ವಿಯೆನ್ನಾದ ಅವಂತ್ ಗಾರ್ಡ್ ಕಲಾ ಶಾಲೆಯಿಂದ ಈ ಕುರ್ಚಿ ತಯಾರಾಗಿತ್ತು. 1902 ರಲ್ಲಿ ಆಸ್ಟ್ರಿಯಾದ ಗೌರವಾನ್ವಿತ ವರ್ಣಚಿತ್ರಕಾರ ಕೊಲೊಮನ್ ಮೋಸರ್ ಅವರು ಕುರ್ಚಿಯನ್ನು ವಿನ್ಯಾಸಗೊಳಿಸಿದ್ದರು. ಮೋಸರ್ ಅವರು ಸಾಂಪ್ರದಾಯಿಕ ಕಲಾತ್ಮಕ ಶೈಲಿಗಳನ್ನು ತಿರಸ್ಕರಿಸಿದ ‘ವಿಯೆನ್ನಾ ಸೆಸೆಶನ್ ಚಳುವಳಿ’ಯ ಕಲಾವಿದರಾಗಿದ್ದವರು.
ಕುರ್ಚಿ ಸಾಂಪ್ರದಾಯಿಕ 18 ನೇ ಶತಮಾನದ ಲ್ಯಾಡರ್-ಬ್ಯಾಕ್ ಕುರ್ಚಿಯ ಆಧುನಿಕ ಕುಸುರಿಯಾಗಿತ್ತು. ಆಸನ ಮತ್ತು ಹಿಂಭಾಗದಲ್ಲಿ ವಿಶೇಷ ಅಲಂಕಾರವನ್ನು ಕುರ್ಚಿ ಹೊಂದಿತ್ತು. ಕಲೆಯ ಇತಿಹಾಸವನ್ನು, ಅಪೂರ್ವ ಕುಸುರಿ ಕಲೆಯನ್ನು ಹೊಂದಿದ್ದ ಈ ಕುರ್ಚಿಯ ಬೆಲೆ ಎಲ್ಲರಿಗೂ ತಿಳಿದಿದ್ದು ಮೌಲ್ಯಮಾಪನದ ನಂತರವೇ! ಇದನ್ನು ಸಂಗ್ರಹಾಲಯಕ್ಕೆ ರವಾನಿಸಲಾಗಿತ್ತು.
ಇದೀಗ ಆಸ್ಟ್ರಿಯಾದ ಡೀಲರ್ ಒಬ್ಬರು ಈ ಕುರ್ಚಿಯನ್ನು ₹ 16.4 ಲಕ್ಷಕ್ಕೆ ಖರೀದಿಸಿದ್ದಾರೆ. ಆದರೆ ಈ ಕುರ್ಚಿ ಹಾಗೂ ಅದರ ಹಿನ್ನೆಲೆಯ ಖಚಿತತೆಯನ್ನು ತಿಳಿಯುವುದು ಹೇಗೆ? ಒಂದು ವೇಳೆ ಈ ಮೌಲ್ಯಮಾಪನ ತಪ್ಪಾಗಿದ್ದರೆ ಎಂಬ ಅನುಮಾನವೂ ಮೌಲ್ಯಮಾಪಕರನ್ನು ಕಾಡಿತ್ತು. ಈ ಅನುಮಾನಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಕುರ್ಚಿಯನ್ನು ಮೌಲ್ಯಮಾಪನ ಮಾಡಿದ ಜಾನ್ ಬ್ಲಾಕ್ ‘ಮಿರರ್’ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಜಾನ್ ಬ್ಲಾಕ್ ಮಾತನಾಡಿ, ‘ಕುರ್ಚಿ ಪಡೆದ ಮೊತ್ತಕ್ಕೆ ಖುಷಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕುರ್ಚಿ ಮರಳಿ ಆಸ್ಟ್ರಿಯಾ ದೇಶಕ್ಕೆ ಹೋಗುತ್ತಿರುವುದು ಸಂತಸದ ವಿಚಾರ’ ಎಂದಿದ್ದಾರೆ. ಅಲ್ಲದೇ ಮೌಲ್ಯಮಾಪನದ ಖಚಿತತೆ ಕುರಿತು ಮಾತನಾಡಿ, ‘‘ಅದರ ನಿಖರತೆ ತಿಳಿಯಲು ವಿಯೆನ್ನಾ ಸೆಸೆಶನ್ ಚಳುವಳಿಯ ಪರಿಣಿತರಾದ ಡಾ.ಕ್ರಿಶ್ಚಿಯನ್ ವಿಟ್ಟ್ ಡೊರಿಂಗ್ ಅವರನ್ನು ವಿಚಾರಿಸಿದೆವು. ಅವರು ಕುರ್ಚಿಯ ಕುಸುರಿ, ಕಲೆಯನ್ನು ಖಚಿತಪಡಿಸಿದ್ದಲ್ಲದೇ, ಮೂಲ ರೂಪದಲ್ಲಿ ಅದು ಉಳಿದಿರುವುದಕ್ಕೆ ಸಂತಸ ಹಂಚಿಕೊಂಡರು’’ ಎಂದಿದ್ದಾರೆ. ಈ ಮೂಲಕ ₹ 500 ರೂ ಬೆಲೆ ನೀಡಿ ಖರೀದಿಸಿದ್ದ ಕುರ್ಚಿ ₹ 16.4 ಲಕ್ಷ ಬೆಲೆಯೊಂದಿಗೆ ಹರಾಜಾದಂತಾಗಿದೆ.
ಇದನ್ನೂ ಓದಿ:
Freedom Convoy ಪ್ರತಿಭಟನೆಗಳ ನಡುವೆ ಕೆನಡಾದ ಪ್ರಧಾನಿ ಕುಟುಂಬ ರಹಸ್ಯ ಸ್ಥಳಕ್ಕೆ ಸ್ಥಳಾಂತರ: ವರದಿ
ಒತ್ತಡದ ಬದುಕಿನಲ್ಲೂ ಸುಮಧುರ ಸಂಬಂಧಕ್ಕೆ ಈ ಟಿಪ್ಸ್ ಅನುಸರಿಸಿ; ಪ್ರಯಾಸದ ಪ್ರಣಯಕ್ಕೆ ಬೈ ಬೈ ಹೇಳಿ