Viral Video: ಇಡೀ ಹಳ್ಳಿಗೇ ಮೊಮೊ ಪಾರ್ಟಿ ಕೊಟ್ಟ ಯೂಟ್ಯೂಬರ್
Uttarakhand : 500 ಜನರಿರುವ ಉತ್ತರಾಖಂಡದ ಹಳ್ಳಿಗೆ ಈ ಯೂಟ್ಯೂಬರ್ ಹೋಗುತ್ತಾನೆ. ಪಾರ್ಟಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುತ್ತಾನೆ. ಈ ವಿಡಿಯೋದಲ್ಲಿ ನಿಮ್ಮನ್ನು ಅಚ್ಚರಿಗೆ ಒಳಪಡಿಸುವ ಕೆಲ ಸಂಗತಿಗಳಿವೆ, ನೋಡಿ.
Uttarakhand : ಅಶ್ವನಿ ಥಾಪಾ ಎಂಬ ಈ ಯೂಟ್ಯೂಬರ್ (Youtuber) ಉತ್ತರಾಖಂಡದ ಬುರಾನ್ಸ್ಖಂಡ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವವರಿಗೆಲ್ಲರಿಗೂ ಮೊಮೊ ಪಾರ್ಟಿ (Momo) ಏರ್ಪಡಿಸುತ್ತಾನೆ. ಪುಟ್ಟಮಕ್ಕಳಾದಿಯಾಗಿ ದೊಡ್ಡವರತನಕವೂ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ. ಇವರು ಆಹ್ವಾನಿಸಿದ್ದು ಒಟ್ಟು 500 ಜನರನ್ನು, ಆದರೆ ಮಳೆಯ ಕಾರಣದಿಂದಾಗಿ ಎಲ್ಲರೂ ಬರಲು ಸಾಧ್ಯವಾಗುವುದಿಲ್ಲ. ಆದರೂ ಬೇಸರಿಸಿಕೊಳ್ಳದೇ ಈ ಅನುಭವವನ್ನು ಆನಂದಿಸಿದ್ದಾನೆ ಈ ಯುವಕ. ಇಲ್ಲಿರುವ ವಿಡಿಯೋದಲ್ಲಿ ಅಶ್ವನಿ ಈ ಹಳ್ಳಿಗೆ ಬರುವುದರಿಂದ ಹಿಡಿದು ಮೊಮೊ ಪಾರ್ಟಿ ಮುಗಿಸುವತನಕವೂ ದೃಶ್ಯಗಳಿವೆ.
ಈ ಹಳ್ಳಿಗೆ ಬಂದೊಡನೆ ಜನರಿಗೆ ಕುಳಿತುಕೊಳ್ಳಲು ಕಾರ್ಪೆಟ್ ವ್ಯವಸ್ಥೆ ಮಾಡುತ್ತಾನೆ. ನೆಲವನ್ನು ಸ್ವಚ್ಛಗೊಳಿಸುತ್ತಾನೆ. ನಂತರ ಮನೆಮನೆಗೆ ಹೋಗಿ ಎಲ್ಲರನ್ನೂ ಆಹ್ವಾನಿಸಿ ಬರುತ್ತಾನೆ. ಆನಂತರ ಪಾರ್ಟಿಗೆ ಬೇಕಾದ ಮೊಮೊ ಇತ್ಯಾದಿ ಪದಾರ್ಥಗಳ ತಯಾರಿಯಲ್ಲಿ ತೊಡಗಿಕೊಳ್ಳುತ್ತಾನೆ. ಆದರೆ ಮಳೆರಾಯ ಇವನ ಪ್ಲ್ಯಾನ್ ಅನ್ನು ಅಂದುಕೊಂಡಂತೆ ನಡೆಯಲು ಬಿಟ್ಟಿಲ್ಲ ಎನ್ನುವುದು ಅವನಿಗೆ ಬೇಸರ ತಂದರೂ ಸಮಚಿತ್ತದಿಂದ ಇದನ್ನು ಸ್ವೀಕರಿಸುತ್ತಾನೆ.
ಇದನ್ನೂ ಓದಿ : Viral: 70ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಎರಡು ವಾರಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 13,000 ಜನರು ನೋಡಿದ್ದಾರೆ. ಸುಮಾರು 2,000 ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡುವಾಗ ನಾನು ಉದ್ದಕ್ಕೂ ನಗುಮುಖದಿಂದಲೇ ನೋಡಿದೆ. ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ. ಸಾಮಾನ್ಯವಾಗಿ ನಮ್ಮ ಹಳ್ಳಿಯ ಜನರು ಸಂಕೋಚ ಸ್ವಭಾವದವರು. ಹಾಗಾಗಿ ಎಲ್ಲರೂ ನಿನ್ನ ಪಾರ್ಟಿಗೆ ಬಂದಿರಲಿಕ್ಕಿಲ್ಲ. ನಾನು ಒಂದು ವರ್ಷದಿಂದ ನನ್ನ ಹಳ್ಳಿ ಮತ್ತು ಭಾರತದಿಂದ ದೂರ ಇದ್ದೇನೆ. ಈ ವಿಡಿಯೋ ನನಗೆ ಖುಷಿ ತಂದಿದೆ, ನಿನಗೆ ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: Viral Video: ಸಾಮಾನ್ಯರ ಕೈಗೆಟುಕಲೆಂದೇ ನನ್ನ ಕಲಾಕೃತಿಗಳನ್ನು ಕಡಿಮೆ ಬೆಲೆಗೆ ಮಾರುತ್ತೇನೆ
ಇಂದಿನ ಯುವಕರಲ್ಲಿ ಸ್ವಾರ್ಥವೇ ಹೆಚ್ಚು ಎಂದುಕೊಳ್ಳುತ್ತೇವೆ. ಆದರೆ ಇಂಥ ಜನೋಪಕಾರ ಮಾಡುವ ನಿಮ್ಮಂಥವರೂ ಇದ್ದಾರೆ. ಈ ವಿಡಿಯೋ ಅತ್ಯಂತ ಸುಂದರವಾಗಿದೆ. ಮಕ್ಕಳ ಮುಖ ಮತ್ತು ನಿಮ್ಮ ಮುಖದ ಮೇಲಿನ ಖುಷಿ ನೋಡಿ ನನಗೆ ಅತ್ಯಂತ ಸಂತೋಷವಾಗಿದೆ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:44 pm, Tue, 11 July 23