ಕೊಳಕು ಯೂನಿಫಾರ್ಮ್ ಧರಿಸಿ ಶೇವ್ ಮಾಡದೆ ಕೆಲಸಕ್ಕೆ ಹಾಜರಾಗುತ್ತಿದ್ದ ಪೇದೆ ವಿರುದ್ಧ ಶಿಸ್ತಿನ ಕ್ರಮಕ್ಕೆ ಶಿಫಾರಸ್ಸು
ಗೋಪಾಲಕೃಷ್ಣ ಗಡ್ಡ ಬೆಳಸಿದವರಲ್ಲ. ಆದರೆ, ಅದನ್ನು ಬೋಳಿಸಿಕೊಳ್ಳದಷ್ಟು ಸೋಮಾರಿತನ ಅವರಲ್ಲಿದೆಯಂತೆ. ಯೂನಿಫಾರ್ಮ್ ಒಗೆಯದೆ, ಇಸ್ತ್ರಿ ಮಾಡದೆ ಧರಿಸುತ್ತಾರೆ. ಖಾಕಿ ಬಟ್ಟೆಯಲ್ಲಿ ಕೊಳೆ ಕಾಣದು ಅಂತ ಅಂದುಕೊಂಡಿರಬಹುದು.
ಬೆಂಗಳೂರು: ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ (police department) ಪೇದೆಯೊಬ್ಬರು ತಮ್ಮ ಯೂನಿಫಾರ್ಮ್ ನೆಡೆ ಗಮನ ನೀಡದೆ, ಶೇವ್ ಮಾಡದೆ ಕರ್ತವ್ಯಕ್ಕೆ ಹಾಜರಾದರೆ ಏನಾಗುತ್ತೆ ಅನ್ನೋದಿಕ್ಕೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ (VV Puram police station) ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ ಎನ್ ಗೋಪಾಲಕೃಷ್ಣ (BN Gopalakrishna) ಅವರ ಪ್ರಕರಣ ಸಾಕ್ಷಿಯಾಗುತ್ತದೆ. ಈ ಪೇದೆಯ ಸಮಸ್ಯೆ ಏನು ಅಂತ ಅವರೇ ಹೇಳಬೇಕು ಮಾರಾಯ್ರೇ. ಅವರನ್ನು ಮುಖ್ಯಮಂತ್ರಿಗಳ ಭದ್ರತೆಗಾಗಿ ನಿಯೋಜಿಸಲಾಗಿದೆ. ಪ್ರತಿದಿನ ಅವರು ಮುಖ್ಯಮಂತ್ರಿಗಳ ನಿವಾಸ ಬಳಿ ಕರ್ತವ್ಯಕ್ಕೆ ಹಾಜರಾಗಬೇಕು. ಅದನ್ನು ಅವರು ಮಾಡುತ್ತಿದ್ದರು ಅದರಲ್ಲೇನೂ ಸಮಸ್ಯೆ ಇರಲಿಲ್ಲ. ಅದರೆ ಅವರು ಕೆಲಸಕ್ಕ ಹಾಜರಾಗುತ್ತಿದ್ದ ರೀತಿ, ವೈಖರಿ ಬಗ್ಗೆ ದೂರುಗಳಿದ್ದವು.
ವಿಷಯ ಏನೆಂದರೆ, ಗೋಪಾಲಕೃಷ್ಣ ಕೊಳಕು ಯೂನಿಫಾರ್ಮ್ ಧರಿಸಿ, ಮುಖ ಶೇವ್ ಮಾಡದೆ ಮುಖ್ಯಮಂತ್ರಿಗಳ ನಿವಾಸದ ಬಳಿ ಬಂದುಬಿಡುತ್ತಿದ್ದರು. ಅದು ಅವರ ಆಲಸಿತನವೋ ಅಥವಾ ಬೇಜವಾಬ್ದಾರಿಯೋ ಅಂತ ಅವರೇ ಹೇಳಬೇಕು. ನಾವು ಸಂಚಾರಿ ವಿಭಾಗದ ಮತ್ತು ಸಿವಿಲ್ ಪೊಲೀಸರನ್ನು ಪ್ರತಿದಿನ ನೋಡುತ್ತಿರುತ್ತೇವೆ.
ಅವರ ಯೂನಿಫಾರ್ಮ್ ಸ್ವಚ್ಛವಾಗಿರುತ್ತದೆ, ಪಾಲಿಶ್ ಮಾಡಿದ ಬೂಟುಗಳು ಮಿರಮಿರ ಮಿಂಚುತ್ತಿರುತ್ತವೆ. ಗಡ್ಡ, ಮೀಸೆ ಬೆಳೆಸಿದ ಪೊಲೀಸರೂ ಇರುತ್ತಾರೆ, ಅದರೆ ಅವುಗಳನ್ನು ನಿಯಮಿತವಾಗಿ ಟ್ರಿಮ್ ಮಾಡುತ್ತಿರುತ್ತಾರೆ.
ಗೋಪಾಲಕೃಷ್ಣ ಗಡ್ಡ ಬೆಳಸಿದವರಲ್ಲ. ಆದರೆ, ಅದನ್ನು ಬೋಳಿಸಿಕೊಳ್ಳದಷ್ಟು ಸೋಮಾರಿತನ ಅವರಲ್ಲಿದೆಯಂತೆ. ಯೂನಿಫಾರ್ಮ್ ಒಗೆಯದೆ, ಇಸ್ತ್ರಿ ಮಾಡದೆ ಧರಿಸುತ್ತಾರೆ. ಖಾಕಿ ಬಟ್ಟೆಯಲ್ಲಿ ಕೊಳೆ ಕಾಣದು ಅಂತ ಅಂದುಕೊಂಡಿರಬಹುದು. ಆರ್ ಟಿ ನಗರ ಇನ್ಸ್ ಪೆಕ್ಟರ್ ಅವರು ಪ್ರತಿದಿನ ಗೋಪಾಲಕೃಷ್ಣಗೆ ಶಿಸ್ತು ಕಾಯ್ದುಕೊಳ್ಳಲು ಹೇಳಿದ್ದಾರೆ.
ಆದರೆ ಈ ಆಸಾಮಿ ತನ್ನ ಮಾತನ್ನು ನಿರ್ಲಕ್ಷಿಸುತ್ತಾ ಹೋಗಿದ್ದರಿಂದ ವಿಧಿಯಿಲ್ಲದೆ ಬೆಂಗಳೂರು ಉತ್ತರ ವಿಭಾಗ ಯಶ್ವಂತಪುರದ ಎಸಿಪಿ ಅವರಿಗೆ ದೂರೊಂದನ್ನು ಸಲ್ಲಿಸಿ ಗೋಪಾಲಕೃಷ್ಣ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾ: ಮಂಚದಲ್ಲಿ 7 ಅಡಿ ಉದ್ದದ ಹಾವು ಮಲಗಿದ್ದನ್ನು ನೋಡಿ ಹೌಹಾರಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ