ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳುವ ಪ್ರಕಾರ ಹೌದು!
ಕೇಂದ್ರ ಸರ್ಕಾರ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹೇರುತ್ತಿದೆ, ಹಾಲು ಮೊಸರನ್ನು ಸಹ ಬಿಟ್ಟಿಲ್ಲ ಅಂತ ಸಚಿವ ರಾಮಲಿಂಗಾರೆಡ್ಡಿ ಹೇಳುತ್ತಾರೆ. ಓಕೆ, ಕೇಂದ್ರ ಸರ್ಕಾರ ಮಾಡುತ್ತಿದೆ ಅಂದಾಕ್ಷಣ ರಾಜ್ಯ ಸರ್ಕಾರವೂ ಮಾಡಬೇಕೇ? ಬೆಲೆಯೇರಿಕೆಯಿಂದ ತತ್ತರಿಸಿರುವ ಜನಕ್ಕೆ ನೆರವಾಗಲೆಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಅನ್ನುವ ಸರ್ಕಾರ ಈಗ ಒಂದಾದ ಮೇಲೆ ಒಂದರಂತೆ ವಸ್ತುಗಳ ಬೆಲೆ ಹೆಚ್ಚಿಸಿದರೆ ಗ್ಯಾರಂಟಿ ಯೋಜನೆಗಳಿಗೆ ಯಾವ ಅರ್ಥ ಉಳಿದೀತು?
ರಾಮನಗರ: ಪೆಟ್ರೋಲ್ ಮತ್ತು ಹಾಲಿನ ಬೆಲೆ ಹೆಚ್ಚಳದಿಂದ ಈಗಾಗಲೇ ತತ್ತರಿಸಿರುವ ಜನರ ಮೇಲೆ ರಾಜ್ಯ ಸರ್ಕಾರ ಆಟೋ ಪ್ರಯಾಣ ದರ ಏರಿಕೆ (auto rickshaw fare hike) ಹೊರೆಯನ್ನೂ ಹಾಕಲಿದೆಯೇ? ರಾಮನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು (Ramalinga Reddy), ಪೆಟ್ರೋಲ್ ಬೆಲೆ (petrol price) ಹೆಚ್ಚಾಗಿರುವುದರಿಂದ ಆಟೋ ಚಾಲಕರು ಮಿನಿಮಮ್ ದರವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿರುವುದು ಸತ್ಯ, ಅದನ್ನು ಸಾರಿಗೆ ಆಯುಕ್ತರಿಗೆ ಕಳಿಸಲಾಗಿದೆ, ಅವರು ಕಮಿಟಿಯೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು. ಆಯಾ ಸಮಯಕ್ಕೆ ಬೆಲೆಗಳು ಹೆಚ್ಚುತ್ತಿರುತ್ತವೆ, ಸರ್ಕಾರೀ ಮತ್ತು ಖಾಸಗಿ ಸಂಸ್ಥೆಗಳಲ ಉದ್ಯೋಗಿಗಳ ಸಂಬಳ ಹೆಚ್ಚಾಗುವಂತೆ ಬೇರೆ ದರಗಳೂ ಹೆಚ್ಚಾಗುತ್ತವೆ ಎಂದು ರೆಡ್ಡಿ ಹೇಳಿದರು. 2014ರಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ₹ 71 ಇತ್ತು. ಬಿಜೆಪಿ ಸರ್ಕಾರ ಅದನ್ನು ₹110 ಗಳಿಗೆ ಹೆಚ್ಚಿಸಿತು. ಅವರು ₹ 30 ಹೆಚ್ಚಿಸಿದರೆ ನಾವು ಕೇವಲ ₹ 3 ಹೆಚ್ಚಿಸಿದ್ದೇವೆ ಅಂತ ರಾಮಲಿಂಗಾರೆಡ್ಡಿ ಹೇಳಿದರು. ಸರ್ಕಾರಗಳು ಪರಸ್ಪರ ದೋಷಾರೋಪಣೆಗಳನ್ನು ಮಾಡುತ್ತಾ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಅಂತ ಜನರಿಗೆ ಅರ್ಥವಾಗುತ್ತಿದೆ, ಆದರೆ ಅವರಿಗೆ ಅರ್ಥವಾಗುತ್ತಿದೆ ಅಂತ ಸರ್ಕಾರಗಳನನ್ನು ನಡೆಸುವವರಿಗೆ ಅರ್ಥವಾಗುತ್ತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವಾಲಯಗಳ ಆದಾಯ ಜಟಾಪಟಿ: ಬಿಜೆಪಿ ನಾಯಕರ ಆರೋಪಗಳಿಗೆ ಸ್ಪಷ್ಟನೆ ನೀಡಿದ ರಾಮಲಿಂಗಾರೆಡ್ಡಿ