ಅವಿವೇಕಿ ಅಜಯ ದೇವಗನ್ ದೇಹದಲ್ಲಿ ಅಮಿತ್ ಶಾ ಹೊಕ್ಕಿರುವಂತಿದೆ: ಚಕ್ರವರ್ತಿ ಚಂದ್ರಚೂಡ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2022 | 4:25 PM

ಪ್ಯಾನ್-ಇಂಡಿಯಾ ಸ್ಟಾರ್ ಗಳೆನಿಸಿಕೊಂಡವರೆಲ್ಲ ಕೇವಲ ಚಿತ್ರರಂಗ ಮಾತ್ರವಲ್ಲ, ಮಿಕ್ಕ ಎಲ್ಲ ವಲಯಗಳಲ್ಲಿ ಹಾಸುಹೊಕ್ಕಿರುವ ಹಿಂದಿ ದಬ್ಬಾಳಿಕೆಯನ್ನು ವಿರೋಧಿಸಬೇಕು. ಸುದೀಪ ಸರ್ ಸತ್ಯವನ್ನೇ ಹೇಳಿದ್ದಾರೆ. ಇದು ಸುದೀಪ್ ವರ್ಸಸ್ ಅಜಯ ದೇವಗನ್ ಅಂತ ಪರಿಗಣಿಸದೆ ಕನ್ನಡಿಗರು ವರ್ಸಸ್ ಹಿಂದು ದಬ್ಬಾಳಿಕೆ ಅಂತ ಭಾವಿಸಬೇಕು ಎಂದು ಅವರು ಹೇಳಿದರು

Bengaluru: ಹಿಂದಿ ಸಿನಿಮಾ ನಟ ಅಜಯ್ ದೇವಗನ್ (Ajay Devgn) ಹಿಂದಿ ಭಾಷೆ (Hindi language) ಬಗ್ಗೆ ತನ್ನ ಭಕ್ತಿ ಮತ್ತು ವ್ಯಾಮೋಹ ಪ್ರದರ್ಶಿಸುವ ಭರದಲ್ಲಿ ಏನೇನೆಲ್ಲ ಮಾತಾಡಿದ್ದಾರೆ ಮತ್ತು ನಮ್ಮ ಕಿಚ್ಚ ಸುದೀಪ್ (Kiccha Sudeep) ಅದಕ್ಕೆ ಪ್ರತಿಕ್ರಿಯೆ ನೀಡಿ ಅವರ ಬಾಯಿ ಮುಚ್ಚಿಸಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಎಲ್ಲ ಕನ್ನಡ ಪರ ಸಂಘಟನೆನಗಳು ಕನ್ನಡದ ಸೂಪರ್ ಸ್ಟಾರ್ ಪರ ನಿಂತಿವೆ. ಇದೇ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಡಿಜಿಟಲ್ ವರದಿಗಾರ್ತಿ ಮಂಗಳಾ ಪತ್ರಕರ್ತ ಮತ್ತು ನಟ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅವರಣದಲ್ಲಿ ಮಾತಾಡಿಸಿದ್ದಾರೆ. ಅಜಯ್ ಹೇಳಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಚಂದ್ರಚೂಡ್, ಹಿಂದಿ ರಾಷ್ಟ್ರಭಾಷೆ ಅಲ್ಲ ಅಂತ ಸಂವಿಧಾನದ ಬಗ್ಗೆ ಅಲ್ಪ ತಿಳುವಳಿಕೆ ಇರುವವನಿಗೂ ಗೊತ್ತು, ಆದರೆ ಅವಿವೇಕಿ ಅಜಯ ದೇವಗನ್ ದೇಹದಲ್ಲಿ ಅಮಿತ್ ಶಾ ಹೊಕ್ಕಿರುವಂತಿದೆ, ಅಥವಾ ಬಿಜೆಪಿ ಸೇರುವ ಉಮೇದಿ ಇಲ್ಲವೇ ಪದ್ಮಶ್ರೀ ಅಥವಾ ರಾಷ್ಟ್ರಪ್ರಶಸ್ತಿ ಪಡೆಯುವ ತಹತಹಿಕೆ ಹಿಂದಿ ಪರ ಮಾತಾಡಲು ಅವರನ್ನು ಪ್ರೇರೇಪಿಸಿರಬಹುದು ಎಂದು ಹೇಳಿದರು.

ದಕ್ಷಿಣ ಭಾರತದ ಚಿತ್ರಗಳು-‘ಪುಷ್ಪಾ’, ‘ಆರ್ ಅರ್ ಅರ್’, ‘ಕೆಜಿಎಫ್-ಚಾಪ್ಟರ್ 2’ ಕಂಡಿರುವ ಪ್ರಚಂಡ ಯಶಸ್ಸು ಅಜಯನಂಥ ಜನರನ್ನು ದಿಗಿಲುಗೊಳ್ಳುವಂತೆ ಮಾಡಿದೆ. ಇಷ್ಟರಲ್ಲೇ ‘ವಿಕ್ರಾಂತ್ ರೋಣ’ ಸಹ ತೆರೆ ಕಾಣಲಿದೆ. ದಕ್ಷಿಣದ ಭಾರತದ ಚಿತ್ರರಂಗದ ಮೇಲೆ ಹಿಂದೆ ಚಿತ್ರಗಳ ದಬ್ಬಾಳಿಕೆ ಇನ್ನು ನಡೆಯದು ಎಂಬ ಆತಂಕವೂ ಅವರನ್ನು ಕಾಡಲಾರಂಭಿಸಿದೆ. ಅಜಯ ತಮ್ಮ ಸಿನಿಮಾದ ಪ್ರಚಾರಕ್ಕಾಗಿಯೂ ಹಿಂದಿ ಪರ ಮಾತಾಡಿರುತ್ತಾರೆ. ಅವರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿ, ಕನ್ನಡ ಚಿತ್ರರಂಗವೆಲ್ಲ ಒಗ್ಗಟ್ಟನಿಂದ ಸುದೀಪ್ ಜೊತೆ ನಿಲ್ಲಬೇಕಿದೆ ಎಂದು ಚಂದ್ರಚೂಡ್ ಹೇಳಿದರು.

ಪ್ಯಾನ್-ಇಂಡಿಯಾ ಸ್ಟಾರ್ ಗಳೆನಿಸಿಕೊಂಡವರೆಲ್ಲ ಕೇವಲ ಚಿತ್ರರಂಗ ಮಾತ್ರವಲ್ಲ, ಮಿಕ್ಕ ಎಲ್ಲ ವಲಯಗಳಲ್ಲಿ ಹಾಸುಹೊಕ್ಕಿರುವ ಹಿಂದಿ ದಬ್ಬಾಳಿಕೆಯನ್ನು ವಿರೋಧಿಸಬೇಕು. ಸುದೀಪ ಸರ್ ಸತ್ಯವನ್ನೇ ಹೇಳಿದ್ದಾರೆ. ಇದು ಸುದೀಪ್ ವರ್ಸಸ್ ಅಜಯ ದೇವಗನ್ ಅಂತ ಪರಿಗಣಿಸದೆ ಕನ್ನಡಿಗರು ವರ್ಸಸ್ ಹಿಂದು ದಬ್ಬಾಳಿಕೆ ಅಂತ ಭಾವಿಸಬೇಕು ಎಂದು ಅವರು ಹೇಳಿದರು.

ಹಾಗೆಯೇ, ಅಜಯ ದೇವಗನ್ ತನ್ನ ಅಜ್ಞಾನವನ್ನು ತಿದ್ದಿಕೊಂಡು ಮುಂದೆ ಹೀಗೆ ಮಾತಾಡದಂತೆ ಎಚ್ಚರವಹಿಸಬೇಕು ಎಂದು ಚಂದ್ರಚೂಡ್ ಹೇಳಿದರು.

ಇದನ್ನೂ ಓದಿ:   ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ