ಉತ್ತರ ಕರ್ನಾಟಕದಲ್ಲಿ ವರ್ಗಾವಣೆ ಹೊಂದಿದ ಮತ್ತೊಬ್ಬ ಶಿಕ್ಷಕರಿಗೆ ಮಕ್ಕಳಿಂದ ಭಾವಪೂರ್ಣ ವಿದಾಯ

ಉತ್ತರ ಕರ್ನಾಟಕದಲ್ಲಿ ವರ್ಗಾವಣೆ ಹೊಂದಿದ ಮತ್ತೊಬ್ಬ ಶಿಕ್ಷಕರಿಗೆ ಮಕ್ಕಳಿಂದ ಭಾವಪೂರ್ಣ ವಿದಾಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 14, 2021 | 5:18 PM

ವಿದ್ಯಾರ್ಥಿಗಳ ಜೊತೆ ಟ್ರಾನ್ಸ್​ಫರ್ ಆಗಿರುವ ಶಿಕ್ಷಕ ಬೀಳಗಿ  ಸಹ ಕಣ್ಣೀರಿಡುತ್ತಿದ್ದಾರೆ. ಬಹಳ ಭಾವುಕ ಮತ್ತು ಹೃದಯ ತುಂಬಿಬರುವ ದೃಶ್ಯವಿದು. ಇದು ಕೆಮೆರಾಗಾಗಿ ಸೃಷ್ಟಿಯಾಗಿರುವ ಸನ್ನಿವೇಶ ಅಲ್ಲ.

ಸರ್ಕಾರೀ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಪ್ರಭಾವವೇ ಹಾಗೆ. ಅದರಲ್ಲೂ ಗ್ರಾಮಾಂತರ ಭಾಗಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮಗೆ ವಿದ್ಯೆ, ಬುದ್ಧಿ, ಶಿಸ್ತು, ನೈತಿಕತೆ, ವಿವೇಕ ಮತ್ತು ವಿವೇಚನೆಗಳನ್ನು ಹೇಳಿಕೊಡುವ ಗುರುವಿಗೆ ಬಹಳ ಉನ್ನತ ಸ್ಥಾನ ನೀಡುತ್ತಾರೆ. ನಾಗರ ಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಮತ್ತ್ತು ರಾಮಾಚಾರಿ ನಡುವೆ ಇದ್ದ ಬಾಂಧವ್ಯವನ್ನು ಗ್ರಾಮಾಂತರ ಭಾಗಗಳ ಶಾಲೆಗಳಲ್ಲಿನ ಮಕ್ಕಳು ಮತ್ತು ಟೀಚರ್ಗಳಲ್ಲಿ ಈಗಲೂ ಕಾಣಬಹುದು. ವಿದ್ಯಾರ್ಥಿಗಳು ತಮ್ಮ ಪಾಲಕರು ಹೇಳುವ ಮಾತನ್ನು ಕೇಳಲಾರರು; ಅದರೆ, ಅವರ ಶಿಕ್ಷಕ ಹಾಕಿದ ಗೆರೆಯನ್ನು ದಾಟುವುದಿಲ್ಲ. ನಾವು ಕೇವಲ ಎರಡು ದಿನಗಳ ಹಿಂದೆಯಷ್ಟೇ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನಲ್ಲಿರುವ ಲಿಂಗಂಪಲ್ಲಿ ಗ್ರಾಮದ ಸರ್ಕಾರೀ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಕುಲಕರ್ಣಿ ಹೆಸರಿನ ಶಿಕ್ಷಕರು ವರ್ಗಾವಣೆ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳು ಮತ್ತು ಇತರ ಶಿಕ್ಷಕರು ಅಳುತ್ತಾ ಅವರಿಗೆ ಕಾಲಿಗೆ ಬೀಳುತ್ತಾ ಬೀಳ್ಕೊಟ್ಟ ವಿಡಿಯೋವನ್ನು ತೋರಿಸಿದ್ದೆವು.

ಮಂಗಳವಾರದಂದು ಅಂಥದ್ದೇ ಒಂದು ವಿಡಿಯೋ ನಮಗೆ ಲಭ್ಯವಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅನವಾಲ ಗ್ರಾಮದಲ್ಲಿರುವ ಸರ್ಕಾರೀ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಸಮಾಜ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಜೆ ಎಸ್ ಬೀಳಗಿ ಹೆಸರಿನ ಶಿಕ್ಷಕರು ವರ್ಗಾವಣೆ ಹೊಂದಿದ್ದು ವಿದ್ಯಾರ್ಥಿಗಳು ಅವರನ್ನು ಅತ್ಯಂತ ಭಾವುಕರಾಗಿ ಬೀಳ್ಕೊಡುತ್ತಿರುವ ಸನ್ನಿವೇಶದ ವಿಡಿಯೋ ಇದು.

ನಿಮಗೆ ಕಾಣುತ್ತಿರುವ ಹಾಗೆ ವಿದ್ಯಾರ್ಥಿಗಳ ಜೊತೆ ಟ್ರಾನ್ಸ್​ಫರ್ ಆಗಿರುವ ಶಿಕ್ಷಕ ಬೀಳಗಿ  ಸಹ ಕಣ್ಣೀರಿಡುತ್ತಿದ್ದಾರೆ. ಬಹಳ ಭಾವುಕ ಮತ್ತು ಹೃದಯ ತುಂಬಿಬರುವ ದೃಶ್ಯವಿದು. ಇದು ಕೆಮೆರಾಗಾಗಿ ಸೃಷ್ಟಿಯಾಗಿರುವ ಸನ್ನಿವೇಶ ಅಲ್ಲ.

ತಮ್ಮ ನೆಚ್ಚಿನ ಶಿಕ್ಷಕ ವರ್ಗವಣೆ ಹೊಂದಿ ಬೇರೆ ಶಾಲೆಗೆ ಹೋಗುತ್ತಿರುವ ದುಃಖವನ್ನು ತಾಳಲಾರದೆ ವಿದ್ಯಾರ್ಥಿಗಳು ಕಣ್ಣೀರು ಸುರಿಸುತ್ತಾ ಅವರ ಪಾದ ಮುಟ್ಟಿ ನಮಸ್ಕರಿಸಿ ಬೀಳ್ಕೊಡುತ್ತಿದ್ದರೆ, ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಶಿಕ್ಷಕರು ಅವರನ್ನು ಬಿಟ್ಟು ಹೋಗುವಂಥ ಸ್ಥಿತಿ ಬಂತಲ್ಲ ಅಂತ ದುಃಖಿಸುತ್ತಿದ್ದರು.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮ: ಅಂತ ನಮ್ಮ ಶಾಸ್ತ್ರಗಳು ಸುಮ್ಮನೆ ಹೇಳಿಲ್ಲ ಮಾರಾಯ್ರೇ!

ಇದನ್ನೂ ಓದಿ:   Family Suicide Case | ಮಗುವಿನ ಸಾವು ಹಸಿವಿನಿಂದ ಅಲ್ಲ ಕೊಲೆ ಆಡಿಯೋ, ವಿಡಿಯೋ ಸಮೇತ ಸಾಕ್ಷಿ ಸಲ್ಲಿಕೆ

Published on: Dec 14, 2021 04:13 PM