ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್! ಏನದು? ಇಲ್ಲಿದೆ ನೋಡಿ
ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ವಾಪಸಾಗಲು 2 ಷರತ್ತು ಹಾಕಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ರಾಜೀನಾಮೆ, ಪಕ್ಷವನ್ನು ಕಳಂಕಿತರ ಕೈಯಲ್ಲಿ ಇರಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಲು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರ, ನವೆಂಬರ್ 1: ಬಿಜೆಪಿಗೆ ವಾಪಸಾಗಬೇಕಿದ್ದರೆ 2 ಷರತ್ತುಗಳು ಪೂರ್ಣವಾಗಬೇಕು ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ರಾಜೀನಾಮೆ ನೀಡಬೇಕು. ಅಲ್ಲದೆ, ‘‘ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ, ನಮ್ಮ ಪಕ್ಷದಲ್ಲಿ ಪ್ರಾಮಾಣಿಕ ಹಿರಿಯರಿದ್ದಾರೆ’’ ಎಂದು ಸ್ಪಷ್ಟಪಡಿಸಬೇಕು. ಹಾಗಾದರೆ ಮಾತ್ರ ಬಿಜೆಪಿಗೆ ಮರಳುವೆ ಎಂದರು.
ಯತ್ನಾಳ್ ಪ್ರಕಾರ, ಕಳಂಕಿತರ ಕೈಯಲ್ಲಿ ಬಿಜೆಪಿ ಉಳಿಯಬಾರದು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಈ ಭೇಟಿಯ ಉದ್ದೇಶ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಾಗಿದೆ ಎಂದು ಅವರು ಹೇಳಿದ್ದಾರೆ. ದೇವೇಗೌಡರು ಮತ್ತು ಮೋದಿ ಅವರ ಸಹಾಯದಿಂದ ವಿಜಯೇಂದ್ರರನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಟೀಕಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ ಎಂದು ಈ ಹಿಂದೆ ಹೇಳಿದ್ದ ಯಡಿಯೂರಪ್ಪ, ಇದೀಗ ವಿಜಯೇಂದ್ರರನ್ನು ಉಳಿಸಲು ಮೈತ್ರಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಆಪಾದಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

