ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಲಾ ವೇಷಧಾರಿಗಳಿಂದ ‘ಹೈಟೆಕ್ ಭಿಕ್ಷಾಟನೆ’! ಇಬ್ಬರ ಬಂಧನ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಟೆಕ್ ಭಿಕ್ಷಾಟನೆ ಮುಂದುವರಿದಿದ್ದು, ಈ ಹಿಂದೆ ಎಚ್ಚರಿಕೆ ನೀಡಿ ಕಳುಹಿಸಿದರೂ ಮತ್ತೆ ಕೃತ್ಯ ಎಸಗಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಟರ್ಮಿನಲ್ 2ರ ನಿರ್ಗಮನ ದ್ವಾರದ ಬಳಿ ಮಾಲಾ ವೇಷದಲ್ಲಿ ಕ್ಯೂಆರ್ ಕೋಡ್ ಬಳಸಿ ಭಿಕ್ಷೆ ಬೇಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು, ಅಕ್ಟೋಬರ್ 17: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಹೈಟೆಕ್ ಭಿಕ್ಷಾಟನೆ’ ದಂಧೆ ಮತ್ತೆ ಬೆಳಕಿಗೆ ಬಂದಿದೆ. ಅಕ್ಟೋಬರ್ 10ರಂದು ಪರ್ಸ್ ಕಳೆದುಹೋಗಿದೆ ಎಂದು ಕ್ಯೂಆರ್ ಕೋಡ್ ತೋರಿಸಿ ಭಿಕ್ಷಾಟನೆ ಮಾಡುತ್ತಿದ್ದ ದೆಹಲಿಯ ಅಮೀನ್ ಎಂಬಾತನನ್ನು ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಈ ಎಚ್ಚರಿಕೆಯ ಹೊರತಾಗಿಯೂ, ಇದೀಗ ಟರ್ಮಿನಲ್ 2ರಲ್ಲಿ ಮಾಲಾ ವೇಷಧಾರಿಗಳಾಗಿ ಭಿಕ್ಷಾಟನೆ ನಡೆಸುತ್ತಿದ್ದ ವೆಂಕಟ್ ದಿನೇಶ್ ಕುಮಾರ್ ಮತ್ತು ಪ್ರತೀಕ್ ಭಾಟಿಯಾ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೆಂಕಟ ದಿನೇಶ್ ಕುಮಾರ್, ಪ್ರತೀಕ್ ಬಾಟಿಯಾ ಬಂಧಿತರು. ಪೊಲೀಸರ ಮಾಹಿತಿ ಪ್ರಕಾರ, ಈ ಇಬ್ಬರು ವ್ಯಕ್ತಿಗಳು ಕಾವಿ ಬಟ್ಟೆ ತೊಟ್ಟು, ಮಾಲೆ ಧರಿಸಿ ವಿಮಾನ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಈ ಹಿಂದೆ ಕೂಡ ಇದೇ ಕೃತ್ಯದಲ್ಲಿ ಭಾಗಿಯಾಗಿದ್ದಾಗ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ, ಎಚ್ಚರಿಕೆಯ ಹೊರತಾಗಿಯೂ ಅವರು ಮತ್ತೆ ವಿಮಾನ ನಿಲ್ದಾಣಕ್ಕೆ ಹಿಂದಿರುಗಿ ಭಿಕ್ಷಾಟನೆಯಲ್ಲಿ ತೊಡಗಿದ್ದರು. ಆರೋಪಿಗಳಿಬ್ಬರೂ ಪ್ರತಿದಿನ ಒಬ್ಬೊಬ್ಬರಾಗಿ ಭಿಕ್ಷಾಟನೆ ಮಾಡುತ್ತಿದ್ದರು. ಒಮ್ಮೆ ಪರ್ಸ್ ಕಳೆದು ಹೋಗಿದೆ ಪರೀಕ್ಷೆಗೆ ಹೋಗಬೇಕು ಅಂತ ಹಣಕ್ಕೆ ಬೇಡಿಕೆಯಿಟ್ಟರೆ, ಮತ್ತೊಮ್ಮೆ ಕಾವಿ ತೊಟ್ಟು, ಮಾಲಾ ವೇಷಧಾರಿಗಳಾಗಿ, ಸಾಧುಗಳಂತೆ ಬಂದು ಹಣಕ್ಕೆ ಬೇಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನಗಳಿಂದ, ಈ ಇಬ್ಬರು ದೇವನಹಳ್ಳಿ ಸಮೀಪದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದಿತ್ತು. ಅವರ ಚಟುವಟಿಕೆಗಳನ್ನು ಗಮನಿಸಿದ ಪೊಲೀಸರು ಅವರನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

