ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್
ಇದಕ್ಕೂ ಮೊದಲು ಸಹ ನಾವು ಹೆಚ್ ವಿಶ್ವನಾಥ್ ಅವರ ದ್ವಂದ್ವ ನಿಲುವಿನ ಬಗ್ಗೆ ವರದಿ ಮಾಡಿದ್ದೇವೆ. ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ನಿಂತಿದ್ದರು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಸ್ವಾಮಿ!
ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಯಾವಾಗ ಯಾರ ಪರ ಮಾತಾಡುತ್ತಾರೆ ಅಂತ ಗ್ರಹಿಸುವುದು ಕಷ್ಟ ಮಾರಾಯ್ರೇ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು (R Ashoka) ತರಾಟೆಗೆ ತೆಗೆದುಕೊಂಡರು. ರಾಜ್ಯದ ವರ್ತಮಾನ ಸಂಕಷ್ಟಗಳೇನು? ರಾಜ್ಯದ ಹಿರಿಯ ರಾಜಕಾರಣಿಯೊಬ್ಬರು (senior politico) ಮತ್ತು ಸ್ವಾಮೀಜಿಗಳ ವಿರುದ್ಧ ಪೋಕ್ಸೋ ಅಡಿ ಕೇಸ್ ದಾಖಲಾಗಿದೆಯಲ್ಲ? ಒಂದೇ ಕುಟುಂಬದ ಇಬ್ಬರು ಯುವ ನಾಯಕರು ಜೈಲಲ್ಲಿರೋದು ಯಾಕೆ? ಇದನ್ನೆಲ್ಲ ಯಾರು ಪ್ರಶ್ನೆ ಮಾಡುತ್ತಾರೆ ಅಶೋಕ ಅವರೇ? ಜನರನ್ನು ಬಾಯಿಗೆ ಬಂದಂತೆ ಬೈದುಕೊಂಡು ಸರ್ಕಾರೀ ಕಾರಿನಲ್ಲಿ ತಿರುಗುವುದಷ್ಟೇ ವಿರೋಧ ಪಕ್ಷದ ನಾಯಕನ ಕೆಲಸವೇ? ಎಂದು ವಿಶ್ವನಾಥ್ ಪ್ರಶ್ನಿಸಿದರು. ನೂತನವಾಗಿ ಸಂಸತ್ತಿಗೆ ಆಯ್ಕೆಯಾಗಿರುವ ನಾಡಿನ ಜನಪ್ರಿಯ ನಟಿ ಕಂಗನಾ ರಣಾವತ್ ಕೆನ್ನೆಗೆ ಒಬ್ಬ ಮಹಿಳಾ ಸೆಕ್ಯುರಿಟಿ ಸಿಬ್ಬಂದಿ ಬಾರಿಸಿದ್ದು ಯಾಕೆ? ಅಯೋಧ್ಯೆಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ರಾಮಮಂದಿರ ಅಗಲೇ ಸೋರಲಾರಂಭಿಸಿದೆ ಎಂದು ವಿಶ್ವನಾಥ್ ಬೇಸರದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುದ್ದಿಗೋಷ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಪರ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ ಹೆಚ್ ವಿಶ್ವನಾಥ್