ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರಿಂದ ತೀವ್ರಗೊಂಡ ಪ್ರತಿಭಟನೆ
ಕಾವೇರಿ ನೀರು ವಿವಾದ ಮತ್ತೆ ಭುಗಿಲೆದ್ದಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕರವೇ ಹಾಗೂ ರೈತ ಹೋರಾಟಗಾರರು ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕದ ಹಿತಾಸಕ್ತಿ ಕಾಯುವಂತೆ ಒತ್ತಾಯಿಸಿದ್ದಾರೆ. ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಿ, ರಾಜ್ಯದ ರೈತರ ಹಿತ ಕಾಯುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಮಂಡ್ಯ, ಆಗಸ್ಟ್ 24: ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣ ಕಾಣಿಸಿದ್ದು, ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ಖಂಡಿಸಿ ಮಂಡ್ಯ ಮತ್ತು ಮೈಸೂರಿನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಹಯುತ್ತಿವೆ. ಮಂಡ್ಯದ ಸಂಜಯ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಮಳೆಯ ಕೊರತೆ ಇದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ. ಮುಂದೆ ತಮಿಳುನಾಡಿಗೆ ಮಳೆ ಬರುವ ಸಾಧ್ಯತೆ ಇರುವುದರಿಂದ ಅವರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಕರ್ನಾಟಕದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ತೀವ್ರ ಸಮಸ್ಯೆ ಎದುರಾಗುತ್ತದೆ ಎಂದು ರೈತ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಡಬ್ಲ್ಯೂಎಂಎ (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ) ಮುಂದೆ ವಾಸ್ತವ ಸ್ಥಿತಿಯನ್ನು ಸರಕಾರ ಅರ್ಥ ಮಾಡಿಸಬೇಕು. ತಮಿಳುನಾಡಿನ ಹಿತಾಸಕ್ತಿ ಕಾಯುವ ಬದಲು ರಾಜ್ಯದ ಹಿತಾಸಕ್ತಿ ಕಾಯಬೇಕು ಎಂದು ಸರಕಾರದ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಮೈಸೂರಿನಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರ ನಿರಂತರ ಹೋರಾಟಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

