AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಡಚಣ ಬ್ಯಾಂಕ್ ದರೋಡೆಯಾಗಿ 9 ತಿಂಗಳಾದರೂ ಸಿಗದ ಚಿನ್ನ: ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ

ಚಡಚಣ ಬ್ಯಾಂಕ್ ದರೋಡೆಯಾಗಿ 9 ತಿಂಗಳಾದರೂ ಸಿಗದ ಚಿನ್ನ: ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ

ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Jun 11, 2026 | 9:48 AM

Share

ವಿಜಯಪುರ ಜಿಲ್ಲೆಯ ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ 9 ತಿಂಗಳ ಹಿಂದೆ ನಡೆದಿದ್ದ 20 ಕೆಜಿ ಚಿನ್ನದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾತು ಕೊಟ್ಟರೂ ಪರಿಹಾರ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಗ್ರಾಹಕರು ರಾತ್ರಿಯಿಡೀ ಬ್ಯಾಂಕ್‌ಗೆ ಬೀಗ ಹಾಕಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಸಂಧಾನ ನಡೆಸಿದ್ದಾರೆ.

ವಿಜಯಪುರ, ಜೂನ್ 11: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಯಲ್ಲಿ 2025 ರ ಸೆಪ್ಟೆಂಬರ್ 16 ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ತಮಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡೀ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಂಟ್ರಿ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ಅಂದು ಬರೋಬ್ಬರಿ 1.50 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು 9 ತಿಂಗಳು ಕಳೆದರೂ ಲಾಕರ್‌ನಲ್ಲಿಟ್ಟಿದ್ದ ಹಾಗೂ ಸಾಲಕ್ಕಾಗಿ ಅಡವಿಟ್ಟಿದ್ದ ತಮ್ಮ ಚಿನ್ನದ ಒಡವೆಗಳು ವಾಪಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್‌ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂನ್ 10 ಕಳೆದರೂ ಬ್ಯಾಂಕ್‌ನಿಂದ ಯಾವುದೇ ಪರಿಹಾರ ಸಿಗದ ಕಾರಣ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನಾಕಾರರು ತಡರಾತ್ರಿ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ದರೋಡೆಕೋರರಿಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರಿಂದ 6.5 ಕೆಜಿ ಚಿನ್ನ ಹಾಗೂ 41 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ತಲೆಮರೆಸಿಕೊಂಡಿರುವ ಪ್ರಮುಖ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More