ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ: ಹೋಮ್ ಗಾರ್ಡ್ ಕಾರು ಜಖಂ, ಅಂಗಡಿ ಪುಡಿ!
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಆವರಣಕ್ಕೆ ರಾತ್ರಿ ವೇಳೆ ಲಗ್ಗೆ ಇಟ್ಟ ಒಂಟಿ ಸಲಗವೊಂದು ತೀವ್ರ ಆಟಾಟೋಪ ನಡೆಸಿದೆ. ಕರ್ತವ್ಯ ನಿರತ ಹೋಮ್ ಗಾರ್ಡ್ ಒಬ್ಬರ ಕಾರನ್ನು ಜಖಂ ಮಾಡುವುದರ ಜೊತೆಗೆ ಪೆಟ್ಟಿ ಅಂಗಡಿಯೊಂದರ ಶೆಟರ್ ಅನ್ನು ಪುಡಿಪುಡಿ ಮಾಡಿದ್ದು, ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದ ಭಕ್ತಾದಿಗಳಲ್ಲಿ ಆತಂಕ ಮೂಡಿಸಿದೆ.
ಚಾಮರಾಜನಗರ, ಜೂನ್ 23: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ಟೈಗರ್ ರಿಸರ್ವ್ (BRT) ಅರಣ್ಯ ಪ್ರದೇಶದಲ್ಲಿರುವ ಸುಪ್ರಸಿದ್ಧ ಬಿಳಿಗಿರಿರಂಗನಾಥ ದೇವಾಲಯದ ಆವರಣದಲ್ಲಿ ಒಂಟಿ ಸಲಗವೊಂದು ದಾಂಧಲೆ ನಡೆಸಿದೆ. ಇಷ್ಟು ದಿನ ಕೇವಲ ಅರಣ್ಯದ ಒಳಗಿನ ಕೆರೆಗಳ ಬಳಿಯಷ್ಟೇ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿತ್ತು. ಇದೀಗ ಒಂಟಿ ಸಲಗವೊಂದು ನೇರವಾಗಿ ದೇವಾಲಯದ ಗೋಪುರದ ಬಳಿಗೇ ಲಗ್ಗೆ ಇಟ್ಟು ಹಾನಿ ಮಾಡಿದೆ. ರಾತ್ರಿ ಕರ್ತವ್ಯ ಮುಗಿಸಿ ಹೋಮ್ ಗಾರ್ಡ್ ರಂಗನಾಥ್ ತಮ್ಮ ಕಾರನ್ನು ದೇವಾಲಯದ ಆವರಣದಲ್ಲೇ ಪಾರ್ಕ್ ಮಾಡಿದ್ದರು. ಮುಂಜಾನೆ ಬಂದು ನೋಡಿದಾಗ ಕಾಡಾನೆಯು ಕಾರಿನ ವೈಪರ್ ಕಿತ್ತುಹಾಕಿ, ದಂತದಿಂದ ತಿವಿದು ಕಾರನ್ನು ಜಖಂ ಮಾಡಿರುವುದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ಒಂದು ಪೆಟ್ಟಿ ಅಂಗಡಿಯ ಶೆಟರ್ ಅನ್ನು ಸಹ ಆನೆ ಜಖಂ ಮಾಡಿದೆ. ಇತಿಹಾಸ ಪ್ರಸಿದ್ಧ ರಂಗನಾಥನ ಸನ್ನಿಧಿಗೆ ಆನೆ ನುಗ್ಗಿರುವ ಕಾರಣ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
