ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸೌಹಾರ್ದತೆ ನೆಲೆಗೊಂಡಿರಬೇಕಾದರೆ ಸದಸ್ಯರ ನಡುವೆ ಸಂವಾದ ಅತಿ ಮುಖ್ಯ: ಡಾ ಸೌಜನ್ಯ ವಶಿಷ್ಠ

ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸೌಹಾರ್ದತೆ ನೆಲೆಗೊಂಡಿರಬೇಕಾದರೆ ಸದಸ್ಯರ ನಡುವೆ ಸಂವಾದ ಅತಿ ಮುಖ್ಯ: ಡಾ ಸೌಜನ್ಯ ವಶಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 16, 2021 | 10:29 PM

ಕುಟುಂಬ ಒಗ್ಗಟ್ಟಾಗಿರಬೇಕು, ಸದಸ್ಯರ ನಡುವೆ ಸಾಮರಸ್ಯ ಮತ್ತು ಪ್ರೀತಿ ಖಾಯಂ ಆಗಿರಬೇಕಾದರೆ, ದಿನದ ಒಂದು ಊಟವನ್ನಾದರೂ ಎಲ್ಲರೂ ಜೊತೆಯಾಗಿ ಕೂತು ಮಾಡಬೇಕು

ಕೌಟುಂಬಿಕ ಬದುಕಿನಲ್ಲಿ ನೆಮ್ಮದಿಯಿರಬೇಕು, ಫ್ಯಾಮಲಿಯ ಎಲ್ಲ ಸದಸ್ಯರನ್ನು ಹೇಗೆ ಸಂತೋಷವಾಗಿಡಬೇಕು ಅನ್ನುವುದನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ. ಈವತ್ತಿನ ಗ್ಯಾಜೆಟ್ ಗಳ ಜಮಾನಾದಲ್ಲಿ ಎಲ್ಲರೂ ತಮ್ಮ ತಮ್ಮ ಸಮಯವನ್ನು ಮೊಬೈಲ್ ಗಳಲ್ಲಿ, ಲ್ಯಾಪ್ ಟಾಪ್ ಇಲ್ಲವೇ ಟ್ಯಾಬ್ ಗಳಲ್ಲಿ ಕಳೆಯುತ್ತಿದ್ದಾರೆ. ಹಾಗಾಗಿ, ಕುಟುಂಬದ ಸದಸ್ಯರ ನಡುವೆ ಮಾತುಕತೆ ಇಲ್ಲದಂತಾಗುತ್ತಿದೆ. ಒಂದು ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಏರ್ಪಟ್ಟಿರ ಬೇಕಾದರೆ ಕಮ್ಯುನಿಕೇಷನ್ ಬಹಳ ಮುಖ್ಯ ಎಂದು ಡಾ ಸೌಜನ್ಯ ಹೇಳುತ್ತಾರೆ. ಭಾವನೆಗಳ ಸ್ವರೂಪ ಏನೇ ಅಗಿರಲಿ, ಅವುಗಳನ್ನು ಹಂಚಿಕೊಳ್ಳಬೇಕು, ಆಗಲೇ ಬಾಂಧವ್ಯಗಳು ಗಟ್ಟಿಗೊಳ್ಳುತ್ತವೆ ಎಂದು ಅವರು ಹೇಳುತ್ತಾರೆ. ಕೌಟುಂಬಿಕ ಸಮಸ್ಯೆಗಳಲ್ಲಿ ಶೇಕಡಾ 53 ರಷ್ಟು ಸಂವಾದದ ಕೊರತೆಯಿಂದ ತಲೆದೋರುತ್ತವೆ ಎಂದು ಸೌಜನ್ಯ ಹೇಳುತ್ತಾರೆ.

ಕುಟುಂಬ ಒಗ್ಗಟ್ಟಾಗಿರಬೇಕು, ಸದಸ್ಯರ ನಡುವೆ ಸಾಮರಸ್ಯ ಮತ್ತು ಪ್ರೀತಿ ಖಾಯಂ ಆಗಿರಬೇಕಾದರೆ, ದಿನದ ಒಂದು ಊಟವನ್ನಾದರೂ ಎಲ್ಲರೂ ಜೊತೆಯಾಗಿ ಕೂತು ಮಾಡಬೇಕು. ಊಟ ಮಾಡುವಾಗ ನಡೆಯುವ ಹರಟೆ, ಮಾತು, ತಮಾಷೆ ಮನೆಯಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಊಟ ಉದರ ಸೇರುತ್ತದೆ ಎಂದು ಸೌಜನ್ಯ ಹೇಳುತ್ತಾರೆ. ಯಾವ ಕಾರಣಕ್ಕೂ ಊಟ ವ್ಯರ್ಥ ಮಾಡಬಾರದು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.

ಮನೆಯಲ್ಲಿ ದುಡಿಯವ ಮಹಿಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು, ಅದು ತಾಯಿಯೇ ಆಗಿರಬಹುದು, ಇಲ್ಲವೇ ಹೆಂಡತಿ, ಅಕ್ಕ-ತಂಗಿ, ಯಾರೇ ಅಗಿರಬಹುದು. ಅವರಿಗೆ ತಕ್ಕ ಗೌರವವನ್ನು ಸಲ್ಲಿಸಲೇ ಬೇಕು. ಯಾವ ಮನೆಯಲ್ಲಿ ಗೃಹಿಣಿ ನಗ್ತಾ ನಗ್ತಾ ಸಂತೋಷವಾಗಿರುತ್ತಾಳೋ ಆ ಮನೆ ನಂದಗೋಕುಲವಾಗಿರುತ್ತದೆ. ಆಕೆಯೊಂದಿಗೆ ಒರಟಾಗಿ ಮಾತಾಡುವುದು, ಮಾಡಿದ ಅಡುಗೆ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಲೇಬಾರದು. ಮಾತಿನಲ್ಲಿ ನಯ-ನಾಜೂಕುತನ ಇರಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ತಂದೆ-ತಾಯಿಗಳು ಮಕ್ಕಳೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಬೇಕು ಅವರಲ್ಲಿ ಸುಂದರ ನೆನೆಪುಗಳನ್ನು ಮೂಡಿಸುವಂಥ ಪ್ರಯತ್ನ ಮಾಡಬೇಕು. ಮಕ್ಕಳ ಶಾಲಾ ಫೀ ಕಟ್ಟಿದರೆ, ಆಟವಾಡಲು ಫೋನ್, ಟ್ಯಾಬ್ ಕೊಡಿಸಿದರೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಗಿಲ್ಟ್ ಪೇರೆಂಟಿಂಗ್ ಯಾವ ಕಾರಣಕ್ಕೂ ಸಲ್ಲದು ಅಂತ ಸೌಜನ್ಯ ಹೇಳುತ್ತಾರೆ.

ತಂದೆಗಳು ವಾರವಿಡೀ ಕೆಲಸದ ನಿಮಿತ್ತ ಹೊರಗಿರುವುದರಿಂದ ಸಂಡೇಯನ್ನು ಸಂಪೂರ್ಣವಾಗಿ ಕುಟುಂಬಕ್ಕೆ ಮೀಸಲಿಡಬೇಕು. ಹಾಗೆಯೇ, ವರ್ಷಕ್ಕೊಮ್ಮೆ ಕುಟುಂಬವನ್ನು ಕುಟುಂಬವನ್ನು ದೂರದ ಪ್ರದೇಶಗಳಿಗೆ ಪ್ರವಾಸ ಕರೆದೊಯ್ಯಬೇಕು. ಪ್ರವಾಸಗಳು ಮನಸನ್ನು ಪ್ರಫುಲ್ಲಗೊಳಿಸುತ್ತವೆ, ದೇಹದಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತವೆ ಎಂದು ಸೌಜನ್ಯ ಹೇಳುತ್ತಾರೆ.

ಮನೆಯಲ್ಲಿ ಸಮಸ್ಯೆ ತಲೆದೋರಿದರೆ ಅದನ್ನು ತಾಳ್ಮೆಯಿಂದ ಪರಿಹರಿಸಬೇಕು ಎಂದು ಹೇಳುವ ಅವರು ಒಬ್ಬ ವ್ಯಕ್ತಿಯ ಯಶಸ್ಸಿಗೆ ಸುಖೀ ಸಂಸಾರ ಕಾರಣವಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:   Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು