ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ದಿವಾಳಿಯಾಗುವ ಸ್ಥಿತಿ ತಲುಪಿದ್ದು, ಯಾವುದಕ್ಕೂ ಅವರ ಬಳಿ ಹಣವಿಲ್ಲ. ಗೃಹಲಕ್ಷ್ಮಿ ಹಣ ಕೊಡಲು ಅವರ ಬಳಿ ಇಲ್ಲ, ಅನ್ನಭಾಗ್ಯ ಅಕ್ಕಿ ಖರೀದಿಗೂ ದುಡ್ಡಿಲ್ಲ ಎಂದರು.
ಹುಬ್ಬಳ್ಳಿ, ಫೆಬ್ರವರಿ 17: ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಕೇಂದ್ರದ ಮೋದಿ ಸರ್ಕಾರ ಕಾರಣ ಎಂದರು. ಆಮೇಲೆ ಕಡಿಮೆ ನಾವು ಮಾಡಿದ್ದೇವೆ ಎಂದರು. ಹೆಚ್ಚು ಮಾಡುವುದು ಮೋದಿ ಸರ್ಕಾರ ಆದರೆ ಇವರು ಹೇಗೆ ಕಡಿಮೆ ಮಾಡುವುದು ಎಂದು ಪ್ರಶ್ನಿಸಿದರು.
ಗೃಹಲಕ್ಷ್ಮೀ ಹಣ ಬಂದಿಲ್ಲ, ಅನ್ನಭಾಗ್ಯ ಅಕ್ಕಿನೂ ಬಂದಿಲ್ಲ. ನಾವು ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಖರೀದಿಸ್ತಿಲ್ಲ. ಇದೀಗ ಅಕ್ಕಿಯೂ ನೀಡ್ತಿಲ್ಲ, ಹಣವೂ ನೀಡ್ತಿಲ್ಲ. ನಮ್ಮ ಬಳಿ ಅಕ್ಕಿ ಇದೆ ಎಂದು ಜೂನ್ ತಿಂಗಳಿನಲ್ಲೇ ಹೇಳಿದ್ದೇನೆ. ಮೊದಲು ಕೆಜಿಗೆ 34 ರೂ. ಇತ್ತು, ಈಗ 28 ರೂ.ಗೆ ಕೊಡುತ್ತೇವೆ ಎಂದರೂ ಖರೀದಿಸ್ತಿಲ್ಲ. ಸಚಿವ ಮುನಿಯಪ್ಪ ಭೇಟಿ ಮಾಡಿ ಹೋದರೂ ಅಕ್ಕಿ ಆರ್ಡರ್ ಮಾಡಿಲ್ಲ. ಯಾಕೆಂದರೆ ಖರೀದಿಸಲು ಅವರ ಬಳಿ ದುಡ್ಡಿಲ್ಲ ಎಂದು ಜೋಶಿ ಟೀಕಿಸಿದರು.