ಮತೀಯ ಗಲಭೆ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ: ನಳಿನ್ ಕುಮಾರ್ ಕಟೀಲ್

ಮತೀಯ ಗಲಭೆ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ: ನಳಿನ್ ಕುಮಾರ್ ಕಟೀಲ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 10, 2022 | 9:14 PM

ಕೇವಲ ರಾಜಕೀಯ ಸ್ವಾರ್ಥ ಸಾಧನೆಗೆ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂದ ಕಟೀಲ್ ಅವರು ಭಾರತದ ಅತ್ಯಂತ ಹಳೆಯ ಪಕ್ಷ ಅವಸಾನದ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಹಿಜಾಬ್ ವಿವಾದ (hijab row) ಯಾವಾಗ ಕೊನೆಗೊಳ್ಳುತ್ತದೋ ಅಂತ ಕನ್ನಡಿಗರೆಲ್ಲ ಕಾಯುತ್ತಿದ್ದಾರೆ. ಕೋರ್ಟ್ ಆದಷ್ಟು ಬೇಗ ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಏತನ್ಮಧ್ಯೆ, ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಪರಸ್ಪರ ಕೆಸರೆರಚಾಟ ಜಾರಿಯಲ್ಲಿದೆ. ವಿವಾದಕ್ಕೆ ಬಿಜೆಪಿಯ ಕಾರಣವೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿಸಿ) (KPCC) ಆಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ದೂಷಿಸಿದ ಬಳಿಕ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ (Nalin Kumar Kateel) ಅವರು ಕೆಪಿಸಿಸಿ ಚೀಫ್ ಅವರ ಹೇಳಿಕೆಗಳು ಹಿಂದೆ ಸದ್ದು ಮಾಡಿದ ಟೂಲ್ ಕಿಟ್ನ ಭಾಗವೆಂದು ಹೇಳಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಮತೀಯ ಗಲಭೆಗಳನ್ನು ಸೃಷ್ಟಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಾ ಬಂದಿದೆ. ಕಾಂಗ್ರೆಸ್ ಗೆ 70 ವರ್ಷಗಳಲ್ಲಿ ಸಾಧ್ಯವಾಗದೇ ಹೋಗಿದ್ದು ಬಿಜೆಪಿ ಸರ್ಕಾರ ಮೂರು ವರ್ಷಗಳಲ್ಲಿ ಮಾಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರನಲ್ಲಿ ತಿರಂಗವನ್ನು ಹಾರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದು ಸಾಧ್ಯವಾಗಿರಲಿಲ್ಲ. ಅದರೆ ಬಿಜೆಪಿ ಸರ್ಕಾರ ಅದನ್ನು ಮಾಡಿತು ಎಂದು ನಳಿನ್ ಕುಮಾರ ಕಟೀಲ್ ಗುರುವಾರ ಬೆಂಗಳೂರಿನಲ್ಲಿ ಹೇಳಿದರು.

ಹಿಜಾಬ್ ವಿವಾದ ಸೃಷ್ಟಿಗೆ ಕಾಂಗ್ರೆಸ್ ಕಾರಣ ಎಂದು ಹೇಳಿದ ಕಟೀಲ್ ಅವರು, ಅಲ್ಪಸಂಖ್ಯಾತ ಸಮುದಾಯದ ಜನರ ಮನಸ್ಸಿನಲ್ಲಿ ಅಭದ್ರತೆಯ ಆತಂಕ ಮೂಡುವಂತೆ ಅದು ಮಾಡುತ್ತಿದೆ ಎಂದರು. ಸಮುದಾಯಗಳ ನಡುವೆ ದ್ವೇಷದ ಕಿಚ್ಚು ಹೊತ್ತಿಸಿ ಕೋಮು ಸೌಹಾರ್ದತೆ ಹಾಳು ಮಾಡುವುದಲ್ಲದೆ ವಿದೇಶಗಳ ಮುಂದೆ ದೇಶದ ಮಾನವನ್ನು ಹರಾಜು ಹಾಕುತ್ತಿದೆ ಎಂದು ಅವರು ಆರೋಪಿಸಿದರು.

ಕೇವಲ ರಾಜಕೀಯ ಸ್ವಾರ್ಥ ಸಾಧನೆಗೆ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂದ ಕಟೀಲ್ ಅವರು ಭಾರತದ ಅತ್ಯಂತ ಹಳೆಯ ಪಕ್ಷ ಅವಸಾನದ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಇದನ್ನೂ ಓದಿ:   ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ, ಅವರನ್ನು ತಡೆಯಿರಿ; ಕಲಬುರಗಿ ನಗರಸಭೆ ಸದಸ್ಯನ ಮಾತಿನ ವಿಡಿಯೋ ವೈರಲ್