ಸಿಟಿ ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್ ಕರೆಗಳು: ವಿಡಿಯೋ ವೈರಲ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ, ಬಿಜೆಪಿ ಎಂಎಲ್ಸಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಸಿಟಿ ರವಿಯವರನ್ನು ಬಂಧಿಸಿದ ಪೊಲೀಸರು ಅವರನ್ನು ರಾತ್ರಿವಿಡೀ ವಿವಿಧಡೆ ಸುತ್ತಾಡಿಸಿದ್ದಾರೆ. ಈ ಸುತ್ತಾಟದ ಮಧ್ಯೆ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಅಥವಾ ಪ್ರಭಾವಿ ವ್ಯಕ್ತಿಗಳ ಫೋನ್ ಕರೆಗಳು ಕೂಡ ಬರುತ್ತಿದ್ದವು ಎಂಬುವುದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದು ವೈರಲ್ ಆಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಅಶ್ಲೀಲ ಪದ ಬಳಕೆ ಮಾಡಿದ್ದ ಆರೋಪದ ಮೇಲೆ ಗುರುವಾರ ಸಂಜೆ ಸಿಟಿ ರವಿಯವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಬಂಧನ ಬಳಿಕ ಪೊಲೀಸರು ಸಿಟಿ ರವಿಯವರನ್ನು ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ಸಿಟಿ ರವಿಯವರನ್ನು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾತ್ರಿವಿಡೀ ಸಿಟಿ ರವಿಯವರನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ, ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಸಿಟಿ ರವಿಯವರ ಜೊತೆ ಕಾರಿನಲ್ಲಿದ್ದ ಓರ್ವ ಪೊಲೀಸ್ ಅಧಿಕಾರಿಗೆ ಕರೆ ಬಂದಿದೆ. ಅಧಿಕಾರಿ ಫೋನಿನಲ್ಲಿ “ಸರಿ ಸರ್, ಸರಿ ಸರ್, ಎಸ್ ಸರ್, ಎಸ್ ಸರ್. ನಾನು ತೆಗೆದುಕೊಳ್ಳುತ್ತೇನೆ ಸರ್, ಓಕೆ ಸರ್ ಎನ್ನುತ್ತಿದ್ದಾರೆ. ಪೊಲೀಸರಿಗೆ ಪ್ರಭಾವಿ ವ್ಯಕ್ತಿ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ಕರೆ ಮಾಡಿ ಆದೇಶ ನೀಡುತ್ತಿದ್ದರು ಎಂಬ ಅನುಮಾನ ವಿಡಿಯೋ ಹುಟ್ಟು ಹಾಕಿದೆ. ಪೊಲೀಸ್ ಅಧಿಕಾರಿ ಫೋನಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಇನ್ನು, ಎಂಎಲ್ಸಿ ಸಿಟಿ ರವಿ ಅವರು ಕೂಡ ಪೊಲೀಸರ ನಡೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಆಗಾಗ ಕರೆಗಳು ಬರುತ್ತಿತ್ತು. ಯಾರೋ ಮೇಲ್ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಆದೇಶ ಮಾಡುತ್ತಿದ್ದರು. ನನಗೆ ಕೇಳಿಸಬಾರದು ಅಂತ ದೂರ ಹೋಗಿ ಮಾತನಾಡುತ್ತಿದ್ದರು ಎಂದು ಮಾಜಿ ಸಚಿವ ಸಿಟಿ ರವಿ ಆರೋಪ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ