ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಪರೋಕ್ಷವಾಗಿ ಪ್ರಜ್ವಲ್ ವಿಚಾರ ಪ್ರಸ್ತಾಪಿಸಿದ ಹೆಚ್ಡಿಕೆ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಾಯಿ ಚೆನ್ನಮ್ಮ ಅವರ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಸಂದರ್ಭ ಭಾವುಕರಾದರು. ಕಳೆದ ಒಂದೂವರೆ ವರ್ಷದಿಂದ ತಾಯಿ ಅನುಭವಿಸಿದ ಹಿಂಸೆ, ಯಾವಾಗ ಕರ್ಕೊಂಡು ಬರ್ತಿಯಪ್ಪ ಎಂಬ ಅವರ ಮಾತುಗಳನ್ನು ನೆನೆದು ಕುಮಾರಸ್ವಾಮಿ ಭಾವುಕರಾದರು. ಸಮಾಧಿ ಸ್ಥಳವನ್ನು ಧಾರ್ಮಿಕ ಮತ್ತು ಸಮಾಜ ಸೇವೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಇಂಗಿತ ವ್ಯಕ್ತಪಡಿಸಿದರು.
ಹಾಸನ, ಜುಲೈ 22: ‘ನಮ್ಮ ಕುಟುಂಬದಲ್ಲಿ ನಡೆದ ಕೆಲವು ಘಟನೆಗಳಿಂದ ತಾಯಿ ಚೆನ್ನಮ್ಮ (ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಪತ್ನಿ) ಮಾನಸಿಕ ಯಾತನೆಗೆ ಒಳಗಾಗಿದ್ದರು. ‘‘ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪ’’ ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ತಮಗೆ ನೋವುಂಟು ಮಾಡುತ್ತದೆ’ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದರು. ಚೆನ್ನಮ್ಮ ಸಮಾಧಿಗೆ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ತಾಯಿ ಅನುಭವಿಸಿದ ಹಿಂಸೆ, ಮಾನಸಿಕ ಯಾತನೆ ನೆನೆದು ಭಾವುಕರಾದರು.
ತಾಯಿ ಚೆನ್ನಮ್ಮ ಕಳೆದ ಒಂದೂವರೆ ವರ್ಷದಿಂದ ಹಾಸಿಗೆ ಹಿಡಿದು ಹಿಂಸೆ ಅನುಭವಿಸಿದ್ದರು. ನೆನಪಿನ ಶಕ್ತಿ ಕುಂದಿ ಹೋಗಿ ಯಾರನ್ನೂ ಗುರುತಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೂ ಈ ಅವಧಿಯಲ್ಲಿ ಅವರು ಯಾರೇ ಬಂದರೂ ‘ಊಟ ಮಾಡಿದೀರಾ? ಊಟ ಮಾಡಿ’ ಎಂಬ ಎರಡು ಪದಗಳನ್ನು ಹೊರತುಪಡಿಸಿ ಬೇರೇನೂ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು. ಆದಾಗ್ಯೂ, ತಮ್ಮನ್ನು ಮತ್ತು ತಮ್ಮಿಬ್ಬರು ತಂಗಿಯರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು ಎಂದು ನೆನೆದು ಕುಮಾರಸ್ವಾಮಿ ಭಾವುಕರಾದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
