Karwar Rain: ಕಾಳಿ ನದಿ ಅಬ್ಬರಕ್ಕೆ ಮಹಾಮಾಯ ದೇವಸ್ಥಾನ ಮಾಯ, ನೂರಾರು ಗ್ರಾಮಗಳಿಗೆ ಪ್ರವಾಹ ಭೀತಿ
ಕಾಳಿ ನದಿ ಆರ್ಭಟಕ್ಕೆ ಕದ್ರಾ ಡ್ಯಾಂ ಭರ್ತಿಯಾಗಿದ್ದು 30,000 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕದ್ರಾ ಗ್ರಾಮದ ಹೊರವಲಯದ ಮಹಾಮಾಯ ದೇವಸ್ಥಾನಕ್ಕೆ ನೀರು ನುಗ್ಗಿದೆ.
ಕಾರವಾರ, ಜುಲೈ 23: ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದೆ. ಕಾಳಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಒಳಹರಿವು ಇದ್ದಿದರಿಂದ ಅಣೆಕಟ್ಟುಗಳು ಭರ್ತಿಯಾಗಿದೆ. ಹೀಗಾಗಿ ಅಣೆಕಟ್ಟುಗಳಿಂದ ನೀರನ್ನ ಹೊರಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಆತಂಕ ಎದುರಾಗಿದೆ. ಅಲ್ಲದೆ ಕಾಳಿ ನದಿ ಆರ್ಭಟಕ್ಕೆ ಕದ್ರಾ ಡ್ಯಾಂ ಭರ್ತಿಯಾಗಿದ್ದು 30,000 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕದ್ರಾ ಗ್ರಾಮದ ಹೊರವಲಯದ ಮಹಾಮಾಯ ದೇವಸ್ಥಾನಕ್ಕೆ ನೀರು ನುಗ್ಗಿದೆ.
ದೇವಸ್ಥಾನದ ಬಾಗಿಲು, ಆವರಣ, ಕಾಣಿಕೆ ಡಬ್ಬಿ ಮುಳುಗಡೆಯಾಗಿದೆ. ದೇವಸ್ಥಾನದ ಹೊರಭಾಗದ ದೇವರ ಮೂರ್ತಿಗಳು ಮುಳುಗಡೆಯಾಗಿವೆ. ಕದ್ರಾ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಕಾರವಾರದ ಕಾಳಿ ನದಿ, ಅಂಕೋಲಾದ ಗಂಗಾವಳಿ, ಕುಮಟಾದ ಅಘನಾಶಿನಿ, ಹೊನ್ನಾವರದ ಶರಾವತಿ ನದಿಯಲ್ಲಿ ನೀರು ಹೆಚ್ಚಾಗುತ್ತಿದೆ. ಯಲ್ಲಾಪುರ ಮತ್ತು ಜೋಯಿಡಾ ಭಾಗದಲ್ಲಿ ಅತ್ಯಧಿಕವಾಗಿ ಮಳೆ ಬಿಳ್ತಾ ಇರೋದ್ರಿಂದ ಕಾಳಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಡ್ಸಳ್ಳಿ ಮತ್ತು ಕದ್ರಾ ಅಣೆಕಟ್ಟುಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರತಿ ಗಂಟೆಗೂ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈಗಾಗಲೇ ಕದ್ರಾ ಅಣೆಕಟ್ಟಿನ ನೀರಿನ ಮಟ್ಟ 31 ಮೀಟರ್ ತಲುಪಿದೆ. ಹೀಗಾಗಿ ಅಣೆಕಟ್ಟಿನ ನೀರನ್ನ ಹೊರ ಬಿಡಲಾಗುತ್ತಿದೆ. ಕಳೆದ ಮುರು ದಿನಗಳಿಂದ ಅಣೆಕಟ್ಟಿನಿಂದ ನೀರನ್ನ ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಎದುರಾಗಿದೆ.