ಸಿದ್ದರಾಮಯ್ಯ ರಾಜೀನಾಮೆ ನೀಡುವ ಕ್ಷಣ ಹತ್ತಿರ: ಕೋರ್ಟ್ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ
ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಬದಲು ಸಿಬಿಐಗೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಇಂದು (ಶುಕ್ರವಾರ) ಆದೇಶ ಹೊರಬೀಳಲಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದ 14 ಸೈಟ್ಗಳ ತನಿಖೆಯನ್ನ ಸಿಬಿಐಗೆ ವಹಿಸಬೇಕೇ ಬೇಡವೇ ಎನ್ನುವ ಬಗ್ಗೆ ಧಾರವಾಡ ಹೈಕೋರ್ಟ್ ಪೀಠ ಇಂದು(ಫೆಬ್ರವರಿ 07) ತೀರ್ಪು ಪ್ರಕಟಿಸಲಿದೆ. ಇನ್ನು ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಮಾತನಾಡಿದ್ದಾರೆ.
ಮೈಸೂರು, (ಫೆಬ್ರವರಿ 07): ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಕೇಸ್ಗೆ ಇಂದು(ಫೆಬ್ರವರಿ 07) ಜಡ್ಜ್ಮೆಂಟ್ ಡೇ. ಅದರಲ್ಲೂ ಈ ತೀರ್ಪು ಸಿಎಂ ಸಿದ್ದರಾಮಯ್ಯರ ಭವಿಷ್ಯವನ್ನೇ ನಿರ್ಧರಿಸಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ಮುಡಾ ಕೇಸ್ನ ತೀರ್ಪು ಪ್ರಕಟವಾಗಲಿದ್ದು, ರಾಜಕಾರಣಿಗಳು ತೀರ್ಪಿನತ್ತ ದೃಷ್ಟಿ ನೆಟ್ಟಿದ್ದಾರೆ. ಮತ್ತೊಂದೆಡೆ ದೂರುದಾರ ಸ್ನೇಹಮಯಿ ಅವರು ಪ್ರತಿಕ್ರಿಯಿಸಿದ್ದು, ಮುಡಾ ಹಗರಣ ತನಿಖೆಯನ್ನು ನ್ಯಾಯಾಲಯ ಸಿಬಿಐಗೆ ಕೊಟ್ಟೇ ಕೊಡುತ್ತದೆ. ಸಿಎಂ ರಾಜೀನಾಮೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿರುವ ಸ್ನೇಹಮಯಿ ಕೃಷ್ಣ ಅವರು, ಮುಡಾ ಹಗರಣ ತನಿಖೆಯನ್ನು ನ್ಯಾಯಾಲಯ ಸಿಬಿಐಗೆ ಕೊಟ್ಟೇ ಕೊಡುತ್ತದೆ. ಸಿದ್ದರಾಮಯ್ಯಗೆ ಮಾತ್ರವಲ್ಲ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಶಿಕ್ಷೆ ಕೊಡಿಸಿಯೇ ಕೊಡಿಸುತ್ತೇನೆ. ಮುಡಾಕ್ಕೆ ಎಲ್ಲಾ ಸೈಟ್ ವಾಪಸ್ ಬರಬೇಕು. ಎಲ್ಲರಿಗೂ ಶಿಕ್ಷೆ ಕೊಡಿಸುವವರೆಗೂ ನಾನು ಈ ಹೋರಾಟ ನಿಲ್ಲಿಸಲ್ಲ ಎಂದು ಶಪಥ ಮಾಡಿದ್ದಾರೆ.