ಸರ್ಕಾರದ ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಸೇರಿ ಮೈಸೂರಿನ ಹಲವೆಡೆ ಐಟಿ ದಾಳಿ

ಸರ್ಕಾರದ ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಸೇರಿ ಮೈಸೂರಿನ ಹಲವೆಡೆ ಐಟಿ ದಾಳಿ

ರಾಮ್​, ಮೈಸೂರು
| Updated By: Ganapathi Sharma

Updated on:Feb 05, 2025 | 10:14 AM

ಮೈಸೂರಿನ ವಿವಿಧೆಡೆಗಳಲ್ಲಿ ಬುಧವಾರ ಮುಂಜಾನೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೋಟೆಲ್, ಕಲ್ಯಾಣ ಮಂಟಪ, ಎಂ ಪ್ರೋ ಪ್ಯಾಲೇಸ್ ಹಾಗೂ ಸರ್ಕಾರದ ಗುತ್ತಿಗೆ ವಹಿಸಿಕೊಳ್ಳುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ನಿವಾಸದ ಮೇಲೂ ದಾಳಿ ನಡೆದಿದೆ. ಮೂರು ಕಾರುಗಳಲ್ಲಿ ಬಂದ ಹತ್ತು ಮಂದಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.

ಮೈಸೂರು, ಫೆಬ್ರವರಿ 5: ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ.

ಮೈಸೂರಿನ ದೇವೇಗೌಡ ವೃತ್ತದ ಬಳಿ ಇರುವ ಎಂ ಪ್ರೋ ಪ್ಯಾಲೇಸ್ ಬಳಿ ಬರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯ ಮೊಬೈಲ್​ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು ಸುಮಾರು 3 ಗಂಟೆಗಳಿಂದ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ಗುತ್ತಿಗೆದಾರ ರಾಮಕೃಷ್ಣೇಗೌಡ ನಿವಾಸದ ಮೇಲೂ ದಾಳಿ ನಡೆದಿದೆ. ರಾಮಕೃಷ್ಣೇಗೌಡ ಸರ್ಕಾರದ ಕಂಟ್ರಾಕ್ಟರ್ ಕೆಲಸ ಮಾಡಿಸುತ್ತಿದ್ದಾರೆ. ಇಟ್ಟಿಗೆ ಫ್ಯಾಕ್ಟರಿ ಸೇರಿ ಇನ್ನಿತರ ವ್ಯವಹಾರ ನಡೆಸುತ್ತಿದ್ದಾರೆ.

ರಾಮಕೃಷ್ಣೇಗೌಡ ನಿವಾಸದಲ್ಲಿ ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರಿದಿದೆ. ರಾಮಕೃಷ್ಣೇಗೌಡ ಕಾರನ್ನೂ ಐಟಿ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಕಾರಿನಲ್ಲಿದ್ದ ದಾಖಲೆ ಪತ್ರಗಳನ್ನು ಮನೆಯೊಳಗೆ ಕೊಂಡೊಯ್ದು ಪರಿಶೀಲನೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಹೊಂದಿರುವ ಆರೋಪ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 05, 2025 10:08 AM