ತಾನೊಬ್ಬ ಉತ್ತಮ ಸಂಸದೀಯ ಪಟು ಅಂತ ಮತ್ತೊಮ್ಮೆ ಸಾಬೀತು ಮಾಡಿದರು ಜೆಡಿ(ಎಸ್) ಶಾಸಕ ಶಿವಲಿಂಗೇಗೌಡ
ಬೆಳಗಾವಿಯಲ್ಲಿ ಈಗ ಜಾರಿಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರದಂದು ಅವರು ಎಂಥ ಸಂಸದೀಯ ಪಟು ಅನ್ನೋದು ಮತ್ತೊಮ್ಮೆ ಸಾಬೀತಾಯಿತು.
ಜೆಡಿ(ಎಸ್) ಪಕ್ಷದ ಶಾಸಕ ಕೆ ಎಮ್ ಶಿವಲಿಂಗೇಗೌಡ ಉತ್ತಮ ವಾಗ್ಮಿ ಮತ್ತು ನುರಿತ ಸಂಸದೀಯ ಪಟುವಾಗಿರುವ ಜೊತೆಗೆ ನೇರ ನುಡಿಗೆ ಖ್ಯಾತರಾದವರು. ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸುವ ಗೌಡರು ಎಂಥ ಛಾತಿವಂತರೆಂದರೆ, ಪಕ್ಷದ ಶಾಸಕಾಂಗ ಸಭೆಯಲ್ಲಿ ಜೆಡಿ (ಎಸ್) ಪಿತಾಮಹ ಹೆಚ್ ಡಿ ದೇವೇಗೌಡರ ಸಮ್ಮುಖದಲ್ಲೇ ರಾಜಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡವರು! ಜೇಡವನ್ನು ಜೇಡವೆಂದೇ ಕರೆಯುವ ಎದೆಗಾರಿಕೆ ಅಂತ ಹೇಳುತ್ತಾರಲ್ಲ, ಅಂಥ ಎದೆಗಾರಿಕೆ ಶಿವಲಿಂಗೇಗೌಡರದ್ದು. ವಿಧಾನ ಸಭೆ ಅಧಿವೇಶನ ನಡೆಯುವಾಗ ತಮ್ಮ ನೇರ ಪ್ರಶ್ನೆಗಳಿಂದ ಗೌಡರು ಹಲವಾರು ಬಾರಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದಾರೆ.
ಬೆಳಗಾವಿಯಲ್ಲಿ ಈಗ ಜಾರಿಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರದಂದು ಅವರು ಎಂಥ ಸಂಸದೀಯ ಪಟು ಅನ್ನೋದು ಮತ್ತೊಮ್ಮೆ ಸಾಬೀತಾಯಿತು. ಪ್ರಾಯಶಃ ನಗರಸಭೆಗಳಿಗೆ ಆಗುತ್ತಿರುವ ಆದಾಯದ ಖೋತಾದ ಬಗ್ಗೆ ಅವರು ಸಂಬಂಧಪಟ್ಟ ಸಚಿವರಿಗೆ ಮೇನ್ ಪ್ರಶ್ನೆ ಕೇಳಿದ್ದಾರೆ. ಸಚಿವರು ಅದಕ್ಕೆ ಉತ್ತರ ನೀಡಿದ್ದಾರೆ. ಅವರು ಉತ್ತರಿಸುವಾಗ ಬೇರೆ ಸದಸ್ಯರು ವಿಷಯಕ್ಕೆ ಪೂರಕವಾದ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮತಿ ನೀಡುತ್ತಾ ಹೋಗಿದ್ದಾರೆ.
ಏತನ್ಮಧ್ಯೆ, ಶಿವಲಿಂಗೇಗೌಡರಿಗೆ ತಮ್ಮ ಉಪಪ್ರಶ್ನೆಯನ್ನು ಕೇಳಲು ಸಾಧ್ಯವಾಗಿಲ್ಲ. ಸದನದ ಕಲಾಪ ಒಂದೇ ಪ್ರಶ್ನೆಯ ಸುತ್ತು ಗಿರಕಿ ಹೊಡೆಯುತ್ತಿರುವುದನ್ನು ಮನಗಂಡ ಸ್ಪೀಕರ್ ಕಾಗೇರಿ ಅವರು, ಮುಂದಿನ ಪ್ರಶ್ನೆಯ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಗೌಡರು, ತಮಗೆ ಉಪಪ್ರಶ್ನೆ ಕೇಳುವ ಅವಕಾಶ ನೀಡದೆ ಅದು ಹೇಗೆ ಮುಂದಿನ ಪ್ರಶ್ನೆ ಕೇಳುತ್ತೀರೆಂದು ಸಭಾಪತಿಗಳನ್ನು ಕೇಳಿದ್ದಾರೆ.
ಅದಕ್ಕೆ ಅಧ್ಯಕ್ಷರು, ಒಂದೇ ಪ್ರಶ್ನೆಗೆ ಹತ್ತು ನಿಮಿಷಕ್ಕಿಂತ ಹೆಚ್ಚು ಸಮಯ ವ್ಯಯವಾಗಿದೆ, ಕಲಾಪದ ಸಮಯ ಮುಗಿಯುತ್ತಾ ಬರುತ್ತಿದೆ, ಹಾಗಾಗಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡಿರುವುದಾಗಿ ಹೇಳುತ್ತಾರೆ. ಆದರೆ, ಅವರ ಮಾತನ್ನು ಅಂಗೀಕರಿಸದ ಗೌಡರು ತನಗೆ ಅವಕಾಶ ನೀಡಲೇ ಬೇಕೆಂದು ಪಟ್ಟು ಹಿಡಿಯುತ್ತಾರೆ.
ಅವರದ್ದೇ ಪಕ್ಷದವರಾದ ಬಂಡೆಪ್ಪ ಕಾಶೆಂಪುರ್ ಬೆಂಬಲಕ್ಕೆ ನಿಂತಾಗ ಸಭಾಧ್ಯಕ್ಷರು ವಿಧಿಯಿಲ್ಲದೆ ಉಪಪ್ರಶ್ನೆಯನ್ನು ಕೇಳುವ ಅವಕಾಶವನ್ನು ಗೌಡರಿಗೆ ನೀಡುತ್ತಾರೆ.