ಸೋಲುತ್ತಿರುವ ಹತಾಶೆಯಲ್ಲಿ ಕಾಂಗ್ರೆಸ್ ಏನೇನೋ ಮಾತಾಡುತ್ತೆ: ಬಾಗಲಕೋಟೆಯಲ್ಲಿ ಅಣ್ಣಾಮಲೈ ತಿರುಗೇಟು

ಸೋಲುತ್ತಿರುವ ಹತಾಶೆಯಲ್ಲಿ ಕಾಂಗ್ರೆಸ್ ಏನೇನೋ ಮಾತಾಡುತ್ತೆ: ಬಾಗಲಕೋಟೆಯಲ್ಲಿ ಅಣ್ಣಾಮಲೈ ತಿರುಗೇಟು

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2024 | 1:08 PM

K Annamalai election rally at Jamakhandi, bagalakote: ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಬಾಗಲಕೋಟೆಯ ಜಮಖಂಡಿ ಮತ್ತು ರಬಕವಿ-ಬನಹಟ್ಟಿಯಲ್ಲಿ ಗುರುವಾರ ಪ್ರಚಾರ ಮಾಡಿದ್ದಾರೆ. ಜಮಖಂಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅಣ್ಣಾಮಲೈ, ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪವೆಲ್ಲಾ ಸೋಲಿನ ಹತಾಶೆಯಲ್ಲಿ ಮಾಡುತ್ತಿರುವುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರ ಪರವಾಗಿ ಅಣ್ಣಾಮಲೈ ಪ್ರಚಾರ ನಡೆಸಿದ್ದಾರೆ.

ಬಾಗಲಕೋಟೆ, ಮೇ 2: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡಿನ ಬಿಜೆಪಿ ಮುಖಂಡ ಕೆ ಅಣ್ಣಾಮಲೈ (K Annamalai) ಅವರು ಬಿಜೆಪಿ ಪರವಾಗಿ ರಾಜ್ಯದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಮುಂದುವರಿಸಿದ್ದಾರೆ. ಮೇ 7ರಂದು ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಅಣ್ಣಾಮಲೈ ಪ್ರಚಾರ ನಡೆಸಿದ್ದಾರೆ. ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಅವರು ಇಂದು ಗುರುವಾರ ಪ್ರಚಾರ ನಡೆಸಿದರು. ಈ ವೇಳೆ 2019ರ ಚುನಾವಣೆಯಲ್ಲಿಯಂತೆ ಉತ್ತರ ಕರ್ನಾಟಕದ ಎಲ್ಲಾ 14 ಸ್ಥಾನಗಳನ್ನು ಬಿಜೆಪಿ ಈ ಬಾರಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಕಾಂಗ್ರೆಸ್ ಸೋಲುತ್ತಾ ಇರುವ ಪಕ್ಷ. ಸೋಲುವವರು ಹತಾಶೆಯಲ್ಲಿ ಏನೇನೋ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ‘ನಾವು 10 ವರ್ಷ ಕೆಲಸ ಮಾಡಿದ್ದೇವೆ. ನಮ್ಮ ಕೆಲಸವನ್ನು ಜನರು ನೋಡಿದ್ದಾರೆ. ಇನ್ನೂ 5 ವರ್ಷ ಮೋದಿಜಿ ಬೇಕು. ಜನರು ಈ ಬಾರಿಯೂ ಎನ್​ಡಿಎಯನ್ನು ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ,’ ಎಂದು ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ; ವಿದೇಶಕ್ಕೆ ಹೋದವರು ರಿಟರ್ನ್ ಟಿಕೆಟ್ ಜೊತೆಯೇ ಹೋಗಿರುತ್ತಾರೆ: ಡಿಕೆ ಸುರೇಶ್

ಕಾಂಗ್ರೆಸ್ ಪಕ್ಷಕ್ಕೆ ಅಮೇಥಿ, ರಾಯಬರೇಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆ ಹತಾಶೆಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ ಎಂದೂ ಅಣ್ಣಾಮಲೈ ಲೇವಡಿ ಮಾಡಿದ್ದಾರೆ.

ಅಣ್ಣಾಮಲೈ ಅವರು ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ತಮಿಳುನಾಡಿನಲ್ಲಿ ಚುನಾವಣೆ ಆದ ಬಳಿಕ ಕೇರಳ ಹಾಗೂ ಕರ್ನಾಟಕದಲ್ಲಿ ಅವರು ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ. ಗದ್ದಿಗೌಡರ ಅವರು ಇದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ