ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ, ಶಾಸಕಾಂಗ ಸಭೆಯ ಇನ್​​ಸೈಡ್​​ ಮಾಹಿತಿ ಇಲ್ಲಿದೆ

Updated on: Dec 09, 2025 | 10:44 PM

ಬೆಳಗಾವಿಯ ಖಾಸಗಿ ಹೋಟೆಲ್​​​ನಲ್ಲಿ ಇಂದು (ಡಿಸೆಂಬರ್ 09) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯವಾಗಿದ್ದು, ಅಧಿವೇಶನದಲ್ಲಿ ವಿಪಕ್ಷಗಳಿಗೆ ಹೇಗೆ ಉತ್ತರ ನೀಡಬೇಬ ಬಗ್ಗೆ ಚರ್ಚೆಯಾಗಿದೆ. ಅದರಲ್ಲೂ ಪ್ರಮುಖವಾಗಿ ಸಭೆಯಲ್ಲಿ ಸ್ವಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಳಗಾವಿ, (ಡಿಸೆಂಬರ್ 09): ಬೆಳಗಾವಿಯ ಖಾಸಗಿ ಹೋಟೆಲ್​​​ನಲ್ಲಿ ಇಂದು (ಡಿಸೆಂಬರ್ 09) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯವಾಗಿದ್ದು, ಅಧಿವೇಶನದಲ್ಲಿ ವಿಪಕ್ಷಗಳಿಗೆ ಹೇಗೆ ಉತ್ತರ ನೀಡಬೇಬ ಬಗ್ಗೆ ಚರ್ಚೆಯಾಗಿದೆ. ಅದರಲ್ಲೂ ಪ್ರಮುಖವಾಗಿ ಸಭೆಯಲ್ಲಿ ಸ್ವಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೌದು… ಗ್ಯಾರಂಟಿ ಯೋಜನೆಗಳನ್ನು ಮಾತ್ರ ನಂಬಿಕೊಂಡಿದ್ದರೆ ಆಗದು. ಗ್ಯಾರಂಟಿ ಯೋಜನೆ ಬಿಟ್ಟು ನಮಗೆ ಅಭಿವೃದ್ಧಿ ಯೋಜನೆಗಳನ್ನು ಕೊಡಿ. ಜನರು ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ಲಾಘಿಸಿ ಮಾತನಾಡುತ್ತಿಲ್ಲ. ಗ್ಯಾರಂಟಿಗಳನ್ನು ನಂಬಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ದೇವಸ್ಥಾನ, ಸಭಾಭವನ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಸಭೆಯಲ್ಲಿ ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಭೆಯಲ್ಲಿ ಶಾಸಕರ ಅಹವಾಲು ಆಲಿಸಲು ಸಿಎಂ, ಡಿಸಿಎಂ ಅವಕಾಶ ನೀಡಿದ್ದು, ಈ ವೇಳೆ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಂಜೇಗೌಡ ಮಾತನಾಡಿ, ನೀವು ಅನೌನ್ಸ್ ಮಾಡಿದ ಅನುದಾನ ಸರಿಯಾಗಿ ಬಂದಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಗ್ಯಾರಂಟಿ ಒಂದೇ ಸಾಲದು. ಅಭಿವೃದ್ಧಿ ಮಾಡಬೇಕು. ಗ್ಯಾರಂಟಿ ಅಂದ್ರೆ ಆಗಲ್ಲ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಂಜೇಗೌಡ ಅಸಮಾಧಾನ ಹೊರಹಾಕಿದ್ದಾರೆ.ಇನ್ನು ನಂಜೇಗೌಡರ ಮಾತಿಗೆ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಸಹ ಧ್ವನಿಗೂಡಿಸಿದ್ದು, ಅಧಿಕಾರಿಗಳು ಯಾರಿಗೂ ಹೆದರುತ್ತಿಲ್ಲ. ಎಲ್ಲಾ ಅರ್ಜಿ ವಾಪಸ್ ಕಳಿಸುತ್ತಾರೆ ಶಾಸಕರ ಕಡತಗಳನ್ನೇ ಪೆಂಡಿಂಗ್ ಇಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

MLC ಸುಧಾಮ್ ದಾಸ್‌ ಮಾತನಾಡಿ, ಸರ್ಕಾರದ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ತಾಂಡವವಾಡ್ತಿದೆ, ಅಧಿಕಾರಿಗಳನ್ನು ಕೇಳೋರು ಯಾರೂ ಇಲ್ಲದಂತೆ ಆಗಿದೆ. ಹೀಗೆ ಮುಂದುವರಿದರೆ ಕಷ್ಟ ಎಂದಿದ್ದಾರೆ.