ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ನಡೆಯಿತು ಸ್ವಾರಸ್ಯಕರ ಚರ್ಚೆ
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ, ಶಾಸಕ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದ ಕುರಿತು ಲೇವಡಿ ಮಾಡಿದ್ದಾರೆ. ಈ ಹಿಂದೆ ನಾನು ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ನಾವು ಎಂದು ಬಹುವಚನದಲ್ಲಿ ಮಾತನಾಡುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಬೆಳಗಾವಿ, ಡಿಸೆಂಬರ್ 16: ಬೆಳಗಾವಿ ಚಳಿಗಾಲದ ಅಧಿವೇಶನ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದು, ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಗುದ್ದಾಟದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಸುರೇಶ್ ಕುಮಾರ್, ‘ಮುಖ್ಯಮಂತ್ರಿಗಳು ಈ ಹಿಂದೆ ನಾನು ಎಂದು ಏಕವಚನದಲ್ಲಿ ಮಾತನಾಡುತ್ತಿದ್ದರು. ಆದರೆ ಈಗ ನಾವು ಎಂಬ ಬಹುವಚನಕ್ಕೆ ಬದಲಾಗಿದ್ದಾರೆ’ ಎಂದು ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಅವರ ಈ ವರ್ತನೆಯು ವೈಯಕ್ತಿಕ ನಾಯಕತ್ವದಿಂದ ಸಾಮೂಹಿಕ ನಾಯಕತ್ವದ ಕಡೆಗೆ ಬದಲಾಗಿರುವುದನ್ನು ಸೂಚಿಸುತ್ತದೆ ಎಂದ ಸುರೇಶ್ ಕುಮಾರ್, ಕನಕದಾಸರ ಮಾತು (ನಾನು ಹೋದರೆ ಹೋದೆನು) ಉಲ್ಲೇಖಿಸಿದರು. ‘ನಾನು’ ಹೋಗಿ ‘ನಾವು’ ಆಗಿದ್ದೇವೆ. ನಾವು ಸರ್ಕಾರ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು. ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ‘ನನ್ನ ಸರ್ಕಾರ’ ಎನ್ನುವುದಕ್ಕಿಂತ ‘ನಮ್ಮ ಸರ್ಕಾರ’ ಎಂಬುದೇ ಸರಿ. ನನ್ನನ್ನು ಕನಕ ದಾಸರ ಜತೆ ಹೋಲಿಸಬೇಡಿ ಎಂದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

