ಕರ್ನಾಟಕವನ್ನು ಕಸದ ತೊಟ್ಟಿ ಮಾಡಿದ್ಯಾ ಕೇರಳ?: ಕೇರಳದ ಮೆಡಿಕಲ್ ತ್ಯಾಜ್ಯ ಕರ್ನಾಟಕದಲ್ಲಿ ಡಂಪ್
ಚಾಮರಾಜನಗರದ ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಕೇರಳದಿಂದ ಅಕ್ರಮವಾಗಿ ವೈದ್ಯಕೀಯ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಎದುರಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಬಗ್ಗೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಸಂಬಂಧಿತ ಅಧಿಕಾರಿಗಳಿಗೆ ಮತ್ತು ಕೇರಳದ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಗುಂಡ್ಲುಪೇಟೆ, ಅ.10: ನೆರೆಯ ಕೇರಳ ರಾಜ್ಯದಿಂದ ಅಪಾಯಕಾರಿ ವೈದ್ಯಕೀಯ (ಮೆಡಿಕಲ್) ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಕಸವನ್ನು ಕರ್ನಾಟಕದ ಗಡಿ ಭಾಗಕ್ಕೆ ತಂದು ಅಕ್ರಮವಾಗಿ ಸುರಿಯುತ್ತಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕೇರಳ ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಪ್ರಮುಖ ರಾಷ್ಟ್ರೀಯ ಹೆದ್ದಾರಿ-766 ರ ಬದಿಯಲ್ಲಿ ಈಚರ್ ಲಾರಿ ಚಾಲಕನೊಬ್ಬ ಮೆಡಿಕಲ್ ತ್ಯಾಜ್ಯ ಬಿಸಾಡಿ ಪರಾರಿಯಾಗಿದ್ದಾನೆ. ಕೇರಳದಿಂದ ಕರ್ನಾಟಕಕ್ಕೆ ಖಾಲಿ ಬರುವ ಸರಕು ಸಾಗಣೆ ಲಾರಿಗಳಲ್ಲಿ ಅಲ್ಲಿನ ಆಸ್ಪತ್ರೆಗಳ ಅಪಾಯಕಾರಿ ಕಸವನ್ನು ತುಂಬಿಕೊಂಡು ಬಂದು, ತಡರಾತ್ರಿ ವೇಳೆ ಹೆದ್ದಾರಿ ಪಕ್ಕದಲ್ಲಿ ಚೆಲ್ಲಿ ಹೋಗುತ್ತಿರುವುದು ಸ್ಥಳೀಯರ ಹಾಗೂ ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇರಳ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ತಪಾಸಣಾ ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತಿದ್ದರೂ, ಈಚರ್ ಲಾರಿಯೊಂದು ರಾಜಾರೋಷವಾಗಿ ಮೆಡಿಕಲ್ ತ್ಯಾಜ್ಯ ಹೊತ್ತು ಬಂದು ಗಡಿ ದಾಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುಂಡ್ಲುಪೇಟೆ ಮೂಲಕ ಹಾದುಹೋಗುವ ಎನ್‌ಎಚ್-766 ರಲ್ಲಿ ಬಳಸಿದ ಸಿರಂಜ್, ಗ್ಲೂಕೋಸ್ ಬಾಟಲಿಗಳು, ಹತ್ತಿ, ಗಾಯದ ಬ್ಯಾಂಡೇಜ್ ಹಾಗೂ ಅಪಾಯಕಾರಿ ಕೆಮಿಕಲ್ ತ್ಯಾಜ್ಯದ ರಾಶಿಯನ್ನೇ ಬಿಸಾಡಲಾಗಿದೆ. ಆಸ್ಪತ್ರೆಯ ಅಪಾಯಕಾರಿ ತ್ಯಾಜ್ಯ ದುರ್ನಾತ ಬೀರುತ್ತಿದ್ದು, ಸುರಿಯಲಾಗಿರುವ ಜಾಗದಲ್ಲಿ ಸಾರ್ವಜನಿಕರಿಗೆ ಹಾಗೂ ವಾಸಿಸುವ ಜನರಿಗೆ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕರ್ನಾಟಕವನ್ನು ಕೇರಳದ “ಕಸದ ತೊಟ್ಟಿ”ಯನ್ನಾಗಿ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಸ್ಥಳೀಯರು ಹಾಗೂ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತ್ಯಾಜ್ಯ ಸುರಿದು ಪರಾರಿಯಾಗಿರುವ ಈಚರ್ ಲಾರಿ ಹಾಗೂ ಚಾಲಕನನ್ನು ಪತ್ತೆಹಚ್ಚಿ ಕಠಿಣ ಚಾಲನಾ ಪರವಾನಗಿ ರದ್ದು ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ತಕ್ಷಣವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ ಕ್ರಿಮಿನಾಶಕ ಸಿಂಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

