ಸೋನಲ್-ತರುಣ್ ಸುಧೀರ್ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್
‘ರಾಬರ್ಟ್’ ಸಿನಿಮಾದಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಅವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಈ ವಿಷಯದ ಬಗ್ಗೆ ತರುಣ್ ಅವರ ತಾಯಿ ಮಾಲತಿ ಸುಧೀರ್ ಅವರು ಮಾತನಾಡಿದ್ದಾರೆ. ಮಗನ ಮದುವೆ ಕುರಿತ ಕೇಳಿಬಂದ ವಿಷಯಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಮದುವೆ ಕುರಿತಂತೆ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ತರುಣ್ ತಾಯಿ ಮಾಲತಿ ಸುಧೀರ್ ಮಾತನಾಡಿದ್ದಾರೆ. ನಟಿ ಸೋನಲ್ ಮಾಂತೆರೋ (Sonal Monteiro) ಜೊತೆ ತರುಣ್ ಸುಧೀರ್ ಅವರು ಮದುವೆ ಆಗಲಿದ್ದಾರೆ ಎಂಬ ಮಾಹಿತಿ ಹರಿದಾಡಿದೆ. ‘ಮದುವೆ ವಿಚಾರ ಇನ್ನೂ ಖಚಿತ ಆಗಿಲ್ಲ. ಖಚಿತ ಆದ ತಕ್ಷಣ ತರುಣ್ ಎಲ್ಲರನ್ನೂ ಕರೆಯುತ್ತಾನೆ. ಹುಡುಗಿ ಹುಡುಕುತ್ತಿದ್ದೇವೆ’ ಎಂದು ಮಾಲತಿ ಸುಧೀರ್ ಹೇಳಿದ್ದಾರೆ. ಸೋನಲ್ ಹೆಸರು ಪ್ರಸ್ತಾಪಿಸಿದ್ದಕ್ಕೆ ‘ಇನ್ನೂ ಕನ್ಫರ್ಮ್ ಆಗಿಲ್ಲ. ಈಗ ಆಷಾಡ ಬಂತಲ್ಲ. ಆ ಬಳಿಕ ಒಂದು ದಿನದಲ್ಲಿ ಮದುವೆ ಆಗಿಬಿಡುತ್ತದೆ. ಅವನಿಗೆ ಇನ್ನೂ ಟೈಮ್ ಕೂಡಿ ಬಂದಿಲ್ಲ. ಆಗಸ್ಟ್ 4, 5, 6ಕ್ಕೆ ದಿನಾಂಕ ಫಿಕ್ಸ್ ಆಗಿದೆ ಎಂಬುದು ಸುಳ್ಳು. ತರುಣ್ ಯಾರನ್ನು ಬೇಕಾದರೂ ಕರೆದುಕೊಂಡು ಬಂದರೂ ನಾವು ಮದುವೆ ಮಾಡುತ್ತೇವೆ’ ಎಂದು ಮಾಲತಿ ಸುಧೀರ್ (Malathi Sudhir) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.