ಬಿಜೆಪಿಯಿಂದ 100 ಕೋಟಿ ರೂ. ಆಫರ್: ಕಾಂಗ್ರೆಸ್ ಶಾಸಕ ರವಿಕುಮಾರ್​ ಗಣಿಗ ಮತ್ತೆ ಆರೋಪ

| Updated By: Ganapathi Sharma

Updated on: Nov 18, 2024 | 9:08 AM

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂಪಾಯಿ ಆಫರ್ ಮಾಡಿತ್ತು, ಆದರೆ ನಮ್ಮ ಶಾಸಕರು ಆ ಕಡೆ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಶಾಸಕ ರವಿಕುಮಾರ್​ ಗಣಿಗ ಆ ಬಗ್ಗೆ ಮಾತನಾಡಿದ್ದು, 50 ಕೋಟಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿದೆ. ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

ಮಂಡ್ಯ, ನವೆಂಬರ್ 18: ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂಪಾಯಿ ಆಫರ್ ಮಾಡಿತ್ತು ಎಂಬ ಸಿಎಂ ಸಿದ್ದರಾಮಯ್ಯ ಆರೋಪದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ರವಿಕುಮಾರ್​ ಗಣಿಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಬಿಜೆಪಿಯಿಂದ 50 ಕೋಟಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿದೆ. ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

ಹಣದ ಆಫರ್ ಕೊಟ್ಟಿದ್ದು ಯಾರು ಎಂಬುದು ಮಾತನಾಡಿದವರಿಗೂ ಗೊತ್ತು, ಮಾತನಾಡಿಸಿದವರಿಗೂ ಗೊತ್ತು. ನಮ್ಮತ್ರ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇವೆ. ಬಿಜೆಪಿಯವರಿಗೆ ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಹಗರಣಗಳ ಕಂಟಕ ಸುತ್ತಿಕೊಂಡಿದೆ. ಅದರಿಂದ ಬಚಾವಾಗಲು, ಆ ಅಕ್ರಮದ ದುಡ್ಡನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಅದರ ಜತೆಗೆ ಕೇಂದ್ರ ಸರ್ಕಾರದ ಬೆಂಬಲ ಇದೆ. ಇದೀಗ ಜೆಡಿಎಸ್​​ ಕೂಡ ಜತೆಗೂಡಿದೆ ಎಂದು ಗಣಿಗ ಟೀಕಿಸಿದ್ದಾರೆ.

ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ‌ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್‌ಡ್ರೈವ್ ಸೇರಿದಂತೆ ಮುಂದುವರಿದು ಐ ಕ್ಲೌಡ್ ಕೂಡ‌ ಇದೆ. ನಮ್ಮ ಶಾಸಕರನ್ನ ಎಲ್ಲೆಲ್ಲಿ ಸಂಪರ್ಕಿಸಿದ್ರು, ಏನೇನು ಆಫರ್ ಮಾಡಿದ್ರು ದಾಖಲೆ ಇದೆ. ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಗಣಿಗ ಮಾತಿನ ವಿಡಿಯೋ ಇಲ್ಲಿದೆ.

ಇದೇ ಮೊದಲಲ್ಲ, ದಾಖಲೆಯೂ ಬಿಡುಗಡೆ ಮಾಡಿಲ್ಲ!

ಅಂದಹಾಗೆ, ರವಿಕುಮಾರ್ ಗಣಿಗ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿಯವರು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಕಳೆದ ಆಗಸ್ಟ್​​ನಲ್ಲೂ ಗಣಿಗ ಆರೋಪ ಮಾಡಿದ್ದರು. ಆಗಲೂ ಸದ್ಯದಲ್ಲೇ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ನಂತರ ಈವರೆಗೆ ಆ ಬಗ್ಗೆ ಪ್ರಸ್ತಾಪಿಸಿಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Nov 18, 2024 08:01 AM