ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಲಹೆಯನ್ನೂ ಕೇಳಿಲ್ಲ: ಸಚಿವ ಜಿ ಪರಮೇಶ್ವರ ಅಸಮಾಧಾನ

| Updated By: Ganapathi Sharma

Updated on: May 29, 2024 | 1:46 PM

ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಸಲಹೆಯನ್ನೂ ಕೇಳಿಲ್ಲ. 7 ಸ್ಥಾನಕ್ಕೆ ಎಷ್ಟು ಅರ್ಜಿಗಳು ಬಂದಿವೆ ಎಂಬುದು ನನಗೆ ಗೊತ್ತಿಲ್ಲ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಇವಾಗ ಕಾಲ ಮೀರಿ ಹೋಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೇ 29: ವಿಧಾನ ಪರಿಷತ್ ಚುನಾವಣೆಗೆ (MLC Election) ಕಾಂಗ್ರೆಸ್​ನಲ್ಲಿ (Congress) ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವ ಮಧ್ಯೆಯೇ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪಕ್ಷದ ಹಿರಿಯ ನಾಯಕರಲ್ಲೇ ಅಸಮಾಧಾನ ಕಂಡುಬಂದಿದೆ. ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಬಳಿ ಸಲಹೆಯನ್ನೂ ಕೇಳಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ (G Parameshawara) ಅಸಮಾಧಾನ ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕೆಲಸ ಮಾಡಿ ಅನುಭವ ಇರುವವರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಸಲಹೆಯನ್ನೂ ಕೇಳಿಲ್ಲ. 7 ಸ್ಥಾನಕ್ಕೆ ಎಷ್ಟು ಅರ್ಜಿಗಳು ಬಂದಿವೆ ಎಂಬುದು ನನಗೆ ಗೊತ್ತಿಲ್ಲ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಇವಾಗ ಕಾಲ ಮೀರಿ ಹೋಗಿದೆ ಎಂದು ಅವರು ಹೇಳಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿದ್ದು, ಹೈಕಮಾಂಡ್ ನಾಯಕರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಪರಮೇಶ್ವರ್ ಅಸಮಾಧಾನ ಪ್ರಕಟಗೊಂಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, 187 ಕೋಟಿ ರೂ. ವರ್ಗಾವಣೆ ಆಗಿದೆ ಎಂದು ಹೇಳುತ್ತಿದ್ದಾರೆ. 187 ಕೋಟಿಯಲ್ಲಿ ತೆಗೆದಿರುವುದು 87 ಕೋಟಿ‌ ರೂಪಾಯಿ ಅಂತಿದ್ದಾರೆ. ಸಿಐಡಿ ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ದೆಹಲಿ ತಲುಪಿದ ಕಾಂಗ್ರೆಸ್ ಆಕಾಂಕ್ಷಿಗಳ ವಿವರ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಹಣ ವರ್ಗಾವಣೆ ಮಾಡಲು ಸಚಿವರು ಆದೇಶ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಸಂಬಂಧಿಸಿದಂತೆ ಎಲ್ಲವೂ ತನಿಖೆ ಆಗಲಿ. ಡೆತ್​ ನೋಟ್ ಬರೆದಿರುವುದು ನಿಜ, ಆದರೆ ಆದೇಶ ಇಲ್ಲ ಎಂದರು. ಕೆಎಸ್ ಈಶ್ವರಪ್ಪ ಕೇಸ್​​ನಲ್ಲಿ ನೇರವಾಗಿ ಹೆಸರು ಉಲ್ಲೇಖಿಸಿದ್ದರು. ಆದರೆ, ಈ ಪ್ರಕರಣದಲ್ಲಿ ನೇರವಾಗಿ ಎಲ್ಲೂ ಸಚಿವರ ಹೆಸರು ಹೇಳಿಲ್ಲ. ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ