AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ನಾಪತ್ತೆಯಾಗಿ 3 ತಿಂಗಳಾದರೂ ಪಿಯು ವಿದ್ಯಾರ್ಥಿನಿಯರ ಸುಳಿವಿಲ್ಲ! ಸಿಐಡಿ ತನಿಖೆಗೆ ಆದೇಶ

ಬೆಂಗಳೂರು: ನಾಪತ್ತೆಯಾಗಿ 3 ತಿಂಗಳಾದರೂ ಪಿಯು ವಿದ್ಯಾರ್ಥಿನಿಯರ ಸುಳಿವಿಲ್ಲ! ಸಿಐಡಿ ತನಿಖೆಗೆ ಆದೇಶ

Shivaprasad B
| Edited By: |

Updated on:Apr 29, 2026 | 2:16 PM

Share

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಪಿಯು ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಜನವರಿ 31ರಂದು ಕಾಣೆಯಾದ ವಿದ್ಯಾರ್ಥಿನಿಯರು ಮೂರು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಪೋಷಕರು ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿ ನಾಪತ್ತೆ ಪ್ರಕರಣದ ತನಿಖೆಯನ್ನು ಇದೀಗ ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಜನವರಿ 31ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮೂರು ತಿಂಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯರು ಆಧಾರ್ ಕಾರ್ಡ್‌ನೊಂದಿಗೆ ಮನೆ ಬಿಟ್ಟು ಹೋಗಿದ್ದು, ಅವರ ಓಡಾಟದ ಸಿಸಿಟಿವಿ ದೃಶ್ಯಗಳು ಸಹ ಲಭ್ಯವಾಗಿದ್ದವು. ಆದರೂ, ಪೊಲೀಸರಿಗೆ ಈವರೆಗೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪೋಷಕರು ಈ ಹಿಂದೆ ಮನವಿ ಮಾಡಿದ್ದರು. ಅಲ್ಲದೆ, ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಕೂಡ ಸಲ್ಲಿಸಿದ್ದರು.

ಇದೀಗ, ಈ ಪ್ರಕರಣದ ಸಂಪೂರ್ಣ ವರದಿಯನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಸಿಐಡಿ ತಂಡವು ನಾಪತ್ತೆಯಾಗಿರುವ ತನಿಷ್ಕ ಮತ್ತು ತೇಜಸ್ವಿನಿ ಪತ್ತೆ ಕಾರ್ಯವನ್ನು ಮುಂದುವರಿಸಲಿದೆ.

ಪೊಲೀಸರಿಗೆ ಸವಾಲಾದ ‘ಮಿಸ್ಟರಿ’ ಕೇಸ್

ಈ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಬೆಂಗಳೂರು ಪೊಲೀಸರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ವಿದ್ಯಾರಣ್ಯಪುರ ಪೊಲೀಸರು ರಚಿಸಿದ್ದ 10 ಸದಸ್ಯರ ವಿಶೇಷ ತಂಡವು ಕಳೆದ 70 ದಿನಗಳಿಂದ ಅಹೋರಾತ್ರಿ ಹುಡುಕಾಟ ನಡೆಸಿದೆ. ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಚಾಮರಾಜನಗರ ಹಾಗೂ ಮೈಸೂರು ಸೇರಿದಂತೆ ದೇಶದ ಹಲವೆಡೆ ಪೊಲೀಸರು ಗಾಳ ಹಾಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ವಿಶೇಷ ತಂಡವೊಂದು ಕೇರಳದಲ್ಲಿ ಬೀಡು ಬಿಟ್ಟು ತಲಾಶ್ ನಡೆಸುತ್ತಿದೆ.

ಟೆಕ್ನಾಲಜಿಗೆ ಸಿಗದ ವಿದ್ಯಾರ್ಥಿನಿಯರು

ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿರುವುದು ತಾಂತ್ರಿಕ ಸಾಕ್ಷ್ಯಗಳ ಕೊರತೆಯಿಂದ. ಈ ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಬಳಸುತ್ತಿಲ್ಲ ಹಾಗೂ ಎಟಿಎಂ ಕಾರ್ಡ್‌ಗಳನ್ನು ಸಹ ಮುಟ್ಟುತ್ತಿಲ್ಲ. ಜೊತೆಗೆ ಸ್ನೇಹಿತರು ಅಥವಾ ಕುಟುಂಬದವರನ್ನು ಯಾವುದೇ ರೀತಿಯಲ್ಲೂ ಸಂಪರ್ಕಿಸುತ್ತಿಲ್ಲ. ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ರಾಜ್ಯದಾದ್ಯಂತ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡುತ್ತಿರುವುದು ಸಿಸಿಟಿವಿ ದೃಶ್ಯಗಳಿಂದ ಈ ಹಿಂದೆ ಪತ್ತೆಯಾಗಿತ್ತು.

ಮಲೆಮಹದೇಶ್ವರ ಬೆಟ್ಟದ ಬಳಿ ಮಿಸ್ಸಿಂಗ್

ಒಂದು ಹಂತದಲ್ಲಿ ಪೊಲೀಸರಿಗೆ ಈ ವಿದ್ಯಾರ್ಥಿನಿಯರು ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಅಲ್ಲಿಂದ ಮಾಯವಾಗಿದ್ದರು. ಕೇವಲ 3,000 ರೂಪಾಯಿ ಹಣ ಹಿಡಿದು ಹೋದವರು ಇಷ್ಟು ದಿನ ಅಜ್ಞಾತರಾಗಿರುವುದು ಹೇಗೆ? ಎಲ್ಲಿಯೂ ‘ಯುಡಿಆರ್ (Unidentified Dead Body)’ ಕೇಸ್‌ಗಳು ದಾಖಲಾಗಿಲ್ಲದ ಕಾರಣ, ಅವರು ತಟಸ್ಥವಾಗಿದ್ದುಕೊಂಡು ತಲೆಮರೆಸಿಕೊಂಡಿದ್ದಾರೆ ಎಂಬುದು ಪೊಲೀಸರ ಬಲವಾದ ಶಂಕೆಯಾಗಿದೆ.

ಪರೀಕ್ಷೆಯ ಭಯವೇ ಕಾರಣ?

ದ್ವಿತೀಯ ಪಿಯುಸಿಯಲ್ಲಿದ್ದ ತನಿಷ್ಕಾ ಮತ್ತು ಆಕೆಯ ಗೆಳತಿ ತೇಜಸ್ವಿನಿ ಜನವರಿ 31ರಂದು ಮನೆ ಬಿಟ್ಟು ಹೋಗಿದ್ದರು. ಇಬ್ಬರೂ ಪರೀಕ್ಷೆಯ ಭಯದಿಂದಾಗಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿತ್ತು. ಕುಟುಂಬಸ್ಥರು ನೀಡಿದ ಮಾಹಿತಿಯ ಮೇರೆಗೆ ಅವರ ಇಷ್ಟದ ಸ್ಥಳಗಳಲ್ಲೆಲ್ಲಾ ಹುಡುಕಾಟ ನಡೆಸಲಾಗಿದ್ದರೂ ಫಲ ನೀಡಿಲ್ಲ. ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದ ಬೆನ್ನಲ್ಲೇ ಪ್ರಕರಣದ ಫೈಲ್‌ಗಳು ಸಿಐಡಿ ಕೈಸೇರಿದ್ದು, ಮುಂದಿನ ತನಿಖೆ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 29, 2026 11:25 AM
Follow Us
Shivaprasad B
Shivaprasad B