AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕುಟುಂಬ ಖರೀದಿ ಮಾಡಿದಾಗ ಅಲ್ಲಿ ಕೃಷಿ ಜಮೀನೇ ಇರಲಿಲ್ಲ! ಅಬ್ರಹಾಂ ಸ್ಫೋಟಕ ಆರೋಪ

ಸಿದ್ದರಾಮಯ್ಯ ಕುಟುಂಬ ಖರೀದಿ ಮಾಡಿದಾಗ ಅಲ್ಲಿ ಕೃಷಿ ಜಮೀನೇ ಇರಲಿಲ್ಲ! ಅಬ್ರಹಾಂ ಸ್ಫೋಟಕ ಆರೋಪ

TV9 Web
| Updated By: Ganapathi Sharma|

Updated on: Aug 02, 2024 | 2:32 PM

Share

ಮುಡಾ ಹರಗಣ ಕುರಿತ ಚರ್ಚೆ ಜೋರಾಗುತ್ತಿದ್ದು, ರಾಜ್ಯಪಾಲರಿಗೆ ದೂರು ನೀಡಿರುವ ಹೋರಾಟಗಾರ ಅಬ್ರಹಾಂ ವಿರುದ್ಧವೂ ಆರೋಪಗಳನ್ನು ಮಾಡಲಾಗಿದೆ. ಅದಕ್ಕೆ ತಿರುಗೇಟು ನೀಡಿರುವ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಅಸಲಿಗೆ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಅಲ್ಲಿ ಕೃಷಿ ಜಮೀನೇ ಇರಲಿಲ್ಲ. ಬಡಾವಣೆಯಾಗಿದ್ದನ್ನು ಕೃಷಿ ಜಮೀನೆಂದು ಬರೆಯಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಆಗಸ್ಟ್ 2: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟಗಾರ ಟಿಜೆ ಅಬ್ರಹಾಂ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಕೆಸರೆಯಲ್ಲಿ ಕೃಷಿ ಜಮೀನೇ ಇರಲಿಲ್ಲ ಎಂದಿದ್ದಾರೆ.

2004ರಲ್ಲಿ ಕೆಸರೆ ಗ್ರಾಮದ 3.16 ಎಕರೆ ಭೂಮಿ ಮಂಜುನಾಥ್ ಸ್ವಾಮಿ ಹೆಸರಿಗೆ ನೋಂದಣಿಯಾಗುತ್ತದೆ. ಆ ಜಾಗ 2001ರಲ್ಲಿಯೇ ದೇವರಾಜ ಬಡಾವಣೆ ಆಗಿತ್ತು. ಆ ಹೆಸರಿನಲ್ಲಿ ಸೈಟು ಮಾಡಿ ಜನರಿಗೆ ನೀಡಿದ್ದರು. ಯಾರಿಗೋ ಹಂಚಿಕೆಯಾಗಿದ್ದ ಸೈಟನ್ನು ನನ್ನ ಕೃಷಿ ಜಮೀನು ಅಂತ ಮಾಡಬಹುದಾ? ವಿಧಾನಸೌದ ಇದ್ದ ಜಾಗ ಹಿಂದೆ ನನ್ನ ಕೃಷಿ ಜಮೀನು ಆಗಿತ್ತು ಅಂತ ನಾನು ದಾಖಲೆ ಕೊಟ್ಟರೆ ಸಿಎಂ ಒಪ್ಪಿಕೊಳ್ಳುತ್ತಾರೆಯೇ? ಕೃಷಿ ಭೂಮಿ ಇಲ್ಲದೇ ಇರುವ ಜಾಗ ಕೃಷಿ ಜಮೀನು ಎಂದು ಮಾರಾಟ ಮಾಡಬಹುದಾ? ಸೈಟುಗಳನ್ನು ಪಡೆದವರ ಹೆಸರಿನಲ್ಲಿ ಇವರು ಕಂದಾಯ ಕಟ್ಟುತ್ತಾ ಇದ್ದರೇ? ರಸ್ತೆ ಮಾಡಿ ಸೈಟು ಮಾಡಿ ಹಂಚಿರುವ ಜಾಗಕ್ಕೆ ಇವರು ಕನ್ವರ್ಷನ್ ಮಾಡಿಸಿಕೊಡುತ್ತಾರಾ ಎಂದು ಅಬ್ರಹಾಂ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

2004ರಲ್ಲಿ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಅಲ್ಲಿ ಕೃಷಿ ಜಮೀನೇ ಇರಲಿಲ್ಲ. ಡಿಸಿ ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರಂತಲ್ಲವೇ? ಆಗ ಸೈಟು ಕಾಣಿಸಲಿಲ್ಲವೇ? ಅದೇ ಸಮಯದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು, ಆಗ ಪ್ರಭಾವ ಬಳಸಲಿಲ್ವಾ? ಇದೇ ಜಮೀನು ಡಿನೋಟಿಫೈ ಆದಾಗಲೂ ಡಿಸಿಎಂ ಆಗಿರಲಿಲ್ವಾ ಸಿದ್ದರಾಮಯ್ಯ? ಭ್ರಷ್ಟಾಚಾರ ತಡೆ ಕಾಯ್ದೆಯಡಿ ನೇರವಾಗಿ ಅವರದೇ ಸಹಿ ಇರಬೇಕು ಅಂತಿಲ್ಲ. 2010ರಲ್ಲಿ ಗಿಫ್ಟ್ ಡೀಡ್ ಆದಾಗ ಕೃಷಿ ಭೂಮಿ ಅಂತ ನಮೂದು ಮಾಡಿತ್ತಾರೆ. 2001ರಲ್ಲಿ ಬಡಾವಣೆ ಆದ ಜಾಗಕ್ಕೆ 2010ರಲ್ಲಿ ರಲ್ಲಿ ಕೃಷಿ ಭೂಮಿ ಅಂತ ನಮೂದು ಮಾಡಿದ್ದರು. ಪಾರ್ವತಿ ಸಿದ್ದರಾಮಯ್ಯ ಅಣ್ಣ ಕೊಂಡುಕೊಂಡಿದ್ದಾರೆ ಎಂಬ ಜಮೀನು ಅಲ್ಲಿ ಇಲ್ಲವೇ ಇಲ್ಲ. ಇಲ್ಲದೇ ಇರುವ ಭೂಮಿಗೆ ಸೈಟು ಹಂಚಿಕೆ ಮಾಡಿಕೊಂಡಿದ್ದಾರೆ. ಇಲ್ಲದೇ ಇರುವ ಭೂಮಿಗೆ ಪರಿಹಾರ ಕೇಳಿದ್ದಾರೆ. ಸಿದ್ದರಾಮಯ್ಯ ನನ್ನ ಜಮೀನು ಬಿಟ್ಟುಕೊಡ್ಲಾ ಅಂತ ಕೇಳಿದರು. ಇಲ್ಲದೇ ಇರುವ ಜಮೀನಿಗೆ ಪರಿಹಾರವೇ? ಸಾಮಾನ್ಯ ಜನರಿಗೆ ಇದು ಸಾಧ್ಯಾವೇ? ಎಂದು ಅಬ್ರಹಾಂ ಪ್ರಶ್ನಿಸಿದರು. ಅಲ್ಲದೆ, ನಾನು ಈ ಪ್ರಕರಣದಲ್ಲಿ ಯಾವತ್ತೂ ಕೂಡ ರಾಜಕಾರಣಿಗಳ ಜೊತೆ ಮಾತಾಡಿಲ್ಲ. ಯಾರಿಗೂ ಕೂಡ ಫೋನ್ ಮಾಡಿಲ್ಲ ಎಂದರು.

ನನ್ನ ಮೇಲೆ ಆರೋಪ ಇರೋದು ನಿಜ: ಅಬ್ರಹಾಂ

ಸಿದ್ದರಾಮಯ್ಯ ವಿಚಾರವಾಗಿ ಕ್ಯಾಬಿನೆಟ್ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ನನ್ನ ಮೇಲೆ ಆರೋಪ ಇದೆ ಅಂತ ಹೇಳಿದ್ದಾರೆ. ಆರೋಪ ಇರುವುದು ಸತ್ಯ, ಆದರೆ ಆರೋಪ ಇದ್ದ ಮಾತ್ರಕ್ಕೆ ಅದು ಅಪರಾಧ ಅಲ್ಲ. ಪ್ರತಿಯೊಂದನ್ನು ನಾನು ಎದುರಿಸಿದ್ದೇನೆ ಎಂದು ಅಬ್ರಹಾಂ ಹೇಳಿದರು.

ಸಿಎಂ ವಿರುದ್ಧ ಕ್ರಮಕ್ಕೆ ಕಾನೂನಲ್ಲಿ ಅವಕಾಶ ಇಲ್ಲ, ಇದೊಂದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ದೂರಿನ ಜೊತೆಗೆ ನಾನು ಕೋರ್ಟ್ ಸರ್ಕ್ಯುಲರ್ ನೀಡಿದ್ದೇನೆ. ಸರ್ಕ್ಯುಲರ್ ಏನಿದೆ ಅಂತ ನೀವೆಲ್ಲ ಸಚಿವರು ನೋಡಲೇ ಇಲ್ವಾ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ

ನಾನು ರಾಜ್ಯಪಾಲರನ್ನು ಭೇಟಿಯಾಗಿದ್ದರಲ್ಲಿ ತಪ್ಪಿಲ್ಲ. ರಾಜ್ಯದ ಕಾನೂನು ಪ್ರಕಾರವೇ ನಾನು ರಾಜ್ಯಪಾಲರ ಭೇಟಿ ಮಾಡಿದ್ದೇನೆ. ಕಾನೂನು ಮಂತ್ರಿಗಳೂ ಕೂಡ ಓದಲಿಲ್ವಾ? ನಾನೇನು ಕಣ್ಮುಚ್ಚಿಕೊಂಡು ಹೋದೆನೇ? ಡಿಸಿಎಂ ಡಿಕೆಶಿವಕುಮಾರ್​​ರಷ್ಟು ನಾನು ಓದಿಲ್ಲ. ನಾನು ರಾಜ್ಯಪಾಲರ ಮುಂದೆ ಒಂದೂವರೆ ಗಂಟೆ ಪ್ರೆಸೆಂಟೇಷನ್ ಮಾಡಿದ್ದೇನೆ. ರಾಜ್ಯಪಾಲರು ಏನೇನು ಸ್ಪಷ್ಟನೆ ಕೇಳಿದ್ದರೋ ಅದಕ್ಕೆಲ್ಲ ಉತ್ತರ ಕೊಟ್ಟಿದ್ದೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ