ಮೈಸೂರು ದಸರಾ: ಸಿಡಿಮದ್ದು ತಾಲೀಮಿನ ವೇಳೆ ಬೆಚ್ಚಿದ ಹಿರಣ್ಯ ಆನೆ, ಮಾವುತನ ಸಾಹಸದಿಂದ ತಪ್ಪಿದ ಅನಾಹುತ
ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಭಾನುವಾರ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಎರಡನೇ ಬಾರಿ ಸಿಡಿಮದ್ದು ಸಿಡಿಸಿ ಅಭ್ಯಾಸ ನಡೆಸಲಾಯಿತು. ಈ ವೇಳೆ, ಆನೆಯೊಂದು ಬೆಚ್ಚಿಬಿದ್ದಿದ್ದರಿಂದ ಭಾರಿ ಅನಾಹುತ ಸಂಭವಿಸುವುದರಲ್ಲಿತ್ತು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಆ ದೃಶ್ಯ ಇಲ್ಲಿದೆ ನೋಡಿ.
ಮೈಸೂರು, ಸೆಪ್ಟೆಂಬರ್ 30: ದಸರಾ ಆನೆಗಳಿಗೆ ಭಾನುವಾರ ಸಿಡಿಮದ್ದು ತಾಲೀಮು ನಡೆಸಲಾಯಿತು. ಇದೇ ವೇಳೆ ಸಿಡಿಮದ್ದು ಸದ್ದಿಗೆ ಬೆಚ್ಚಿದ ಹಿರಣ್ಯ ಆನೆ ಸರದಿಯಿಂದ ಆಚೆ ಬಂದು ಓಡಲು ಯತ್ನಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಮಾವುತ, ಕಾವಾಡಿಗಳು ಆನೆಯನ್ನು ಹೇಗೋ ಮಾಡಿ ನಿಯಂತ್ರಿಸಿದರು. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಿಡಿಮದ್ದು ಸದ್ದು ಕೇಳಿ ಹಿರಣ್ಯ ಆನೆ ಬೆಚ್ಚಿಬಿದ್ದು ಓಡಲು ಶುರು ಮಾಡಿತು. ಆನೆ ಓಡಲು ಮುಂದಾದ ಕೂಡಲೇ ಮಾವುತ ಶಫಿಯುಲ್ಲಾ ಹಾಗೂ ಕಾವಾಡಿ ಮನ್ಸೂರ್ ಧೈರ್ಯದಿಂದ ಅದನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಮಾವುತ ಶಫಿಯುಲ್ಲಾ ಆನೆಯ ಮೇಲಿದ್ದರೆ, ಕೆಳಗಿದ್ದ ಕಾವಾಡಿ ಮನ್ಸೂರ್ ಆನೆಯ ಕಿವಿಗೆ ಅಂಕುಶ ಹಾಕಿ ತಡೆದು ನಿಲ್ಲಿಸಿದರು. ಒಂದು ವೇಳೆ ಆನೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಹೋಗಿದ್ದರೆ ಅದು ಜನರತ್ತ ಓಡಿ ಅನಾಹುತ ಸಂಭವಿಸುತ್ತಿತ್ತು. ಇದೀಗ ಮಾವುತ ಹಾಗೂ ಕಾವಾಡಿಯ ಸಾಹಸಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ