ತಂತ್ರಜ್ಞಾನ ಹೆಚ್ಚು ಮಂದಿಗೆ ನೆರವಾಗಬೇಕು; ಶಕ್ತಿಯಿಂದ ಸಬಲೀಕರಣವಾಗಬೇಕು: ಬ್ಲೋಮ್ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
Bloomberg New Economy Forum 2026, Delhi: ನರೇಂದ್ರ ಮೋದಿ ಅವರು ಬ್ಲೂಮ್‌ಬರ್ಗ್ ನ್ಯೂ ಎಕನಾಮಿ ಫೋರಂನಲ್ಲಿ 'ಶಕ್ತಿ ಎಂದರೆ ಸಬಲೀಕರಣ' ಎಂದು ಹೇಳಿದರು. ಭಾರತ ಪ್ರಜಾತಂತ್ರದ ತಾಯಿ, ತಂತ್ರಜ್ಞಾನದಿಂದ ಡಿಜಿಟಲ್ ಕ್ರಾಂತಿ ಆಗುತ್ತಿದೆ ಎಂದರು. ಸೌರ ಮೈತ್ರಿ, ಜೈವಿಕ ಇಂಧನ ಮೈತ್ರಿ ಸೇರಿದಂತೆ ಭಾರತದ ಜಾಗತಿಕ ಕೊಡುಗೆಗಳನ್ನು ವಿವರಿಸಿದರು. ಜಿಎಸ್‌ಟಿ, ಜ್ಯಾಮ್ ಟ್ರಿನಿಟಿ ಮೂಲಕ ಆರ್ಥಿಕ ಸುಧಾರಣೆಗಳನ್ನು ಎತ್ತಿಹಿಡಿದರು. ದೆಹಲಿಯಲ್ಲಿ ನಡೆಯುತ್ತಿರುವ ಈ ಫೋರಂನಲ್ಲಿ ಉದ್ಯಮಿಗಳು, ಆರ್ಥಿಕ ತಜ್ಞರು ಭಾಗವಹಿಸಿದ್ದಾರೆ.
ನವದೆಹಲಿ, ಅಕ್ಟೋಬರ್ 13: ಶಕ್ತಿ ಎಂಬುದು ಮುಂದೆ ಚಲಿಸುವ ಸಾಮರ್ಥ್ಯ ನೀಡುವುದು ಮಾತ್ರವಲ್ಲ, ಇತರರಿಗೂ ಮುಂದೆ ಚಲಿಸುವ ಸಾಮರ್ಥ್ಯ ಕೊಡುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಬ್ಲೂಮ್‌ಬರ್ಗ್ ಎಕನಾಮಿ ಫೋರಂ 2026 ಸಭೆಯಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಸಬಲೀಕರಣಕ್ಕೆ ಶಕ್ತಿ ಇರಬೇಕೆನ್ನುವುದು ಭಾರತದ ಚಿಂತನೆ ಎಂದಿದ್ದಾರೆ.
ಈ ಬಾರಿಯ ಫೋರಂನಲ್ಲಿ ಉದಯೋನ್ಮುಖ ಶಕ್ತಿಗಳ ಥೀಮ್ ಇದೆ. 21ನೇ ಶತಮಾನದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ಇವತ್ತು ತಂತ್ರಜ್ಞಾನ, ಡಾಟಾ, ಜ್ಞಾನ, ನಾವೀನ್ಯತೆಯೇ ಶಕ್ತಿಯಾಗಿದೆ. ತಂತ್ರಜ್ಞಾನವು ಕೆಲವರಿಗೆ ಮಾತ್ರ ನೆರವಾಗುತ್ತದಾ, ಅಥವಾ ಲಕ್ಷಾಂತರ ಮಂದಿಯನ್ನು ಸಬಲೀಕರಣಗೊಳಿಸುತ್ತದಾ ಎಂಬುದು ಪ್ರಶ್ನೆ. ಶಕ್ತಿ ಯಾರು ಹೊಂದಿದ್ದಾರೆ ಎಂಬುದಲ್ಲ, ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದು ಪ್ರಶ್ನೆ ಎಂದು ನರೇಂದ್ರ ಮೋದಿ ತಿಳಿಸಿದರು.
ಭಾರತ ಪ್ರಜಾತಂತ್ರದ ತಾಯಿ
ಭಾರತ ಪ್ರಜಾತಂತ್ರದ ತಾಯಿಯಾಗಿದೆ. ಇಲ್ಲಿ ಎಲ್ಲವನ್ನೂ, ಎಲ್ಲರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ಸಮಸ್ಯೆಗಳ ಬಗ್ಗೆ ಪ್ರಜಾತಾಂತ್ರಿಕವಾಗಿ ಚರ್ಚಿಸುತ್ತೇವೆ. ಇಲ್ಲಿ ನೂರಕ್ಕೂ ಭಾಷೆಗಳಿವೆ. 80,000 ನೊಂದಾಯಿತ ದಿನಪತ್ರಿಕೆಗಳು, ಮುದ್ರಣ ಸಂಸ್ಥೆಗಳಿವೆ. 500 ಮಿಲಿಯನ್ ಯೂಟ್ಯೂಬ್ ಬಳಕೆದಾರರು, 500 ಮಿಲಿಯನ್ಗೂ ಅಧಿಕ ಇನ್ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಡಿಜಿಟಲ್ ಪವರ್ನಿಂದಾಗಿ ಜನರು ಪರಸ್ಪರ ಸಂಪರ್ಕಿಸಿ, ಚರ್ಚಿಸಲು ಸಾಧ್ಯವಾಗಿದೆ ಎಂದು ಬ್ಲೂಮ್ವರ್ಗ್ ನ್ಯೂ ಎಕನಾಮಿ ಫೋರಂ ಸಭೆಯಲ್ಲಿ ಮೋದಿ ತಿಳಿಸಿದರು.
ಇದನ್ನೂ ಓದಿ: ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಆರ್ಥಿಕತಜ್ಞರು ರೂಪಿಸಿದ ಎಕನಾಮಿಕ್ ಮಾಡಲ್ಗಳು ಎಷ್ಟು ಉಪಯುಕ್ತ ನೋಡಿ…
ವಿಶ್ವಕ್ಕೆ ಭಾರತ ಇತ್ತ ಕೊಡುಗೆಗಳಿವು…
ಭಾರತ ವಿಶ್ವಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವುದನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಪ್ರತಿಯೊಬ್ಬರಿಗೂ ನೆರವಾಗುವ ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್, ಬಿಗ್ ಕ್ಯಾಟ್ ಅಲಾಯನ್ಸ್, ಬಯೋಫೂಯೆಲ್ ಅಲಾಯನ್ಸ್, ಮಿಷನ್ ಲೈಫ್, ಐಮೆಕ್ (ಇಂಡಿಯ-ಮಿಡಲ್ಈಸ್ಟ್-ಯೂರೋಪ್ ಕಾರಿಡಾರ್) ಪ್ಲಾಟ್ಫಾರ್ಮ್ಗಳನ್ನು ಭಾರತ ರೂಪಿಸಿದೆ. ಒಂದು ಸೂರ್ಯ, ಒಂದು ವಿಶ್ವ ಮತ್ತು ಒಂದು ಗ್ರಿಡ್ ಇದು ಭಾರತದ ಆಶಯ. ಒಂದು ಕುಟುಂಬ ಮತ್ತು ಒಂದು ಭವಿಷ್ಯ ಇದು ಭಾರತದ ಗುರಿ. ಜಗತ್ತಿಗೆ ಸಂಪರ್ಕ ಕೊಡುವುದು ಮತ್ತು ಇತರರನ್ನು ಸಬಲೀಕರಣಗೊಳಿಸುವುದು ಭಾರತದ ಆದ್ಯತೆ ಎಂದು ನರೇಂದ್ರ ಮೋದಿ ಈ ಸಂದರ್ಭದಲ್ಲಿ ವಿವರಿಸಿದರು.
ಭಾರತದಲ್ಲಿ ಜ್ಯಾಮ್ ಟ್ರಿನಿಟಿ (ಜನ್ಧನ್-ಆಧಾರ್-ಮೊಬೈಲ್ ಸಂಯೋಗ), ಜಿಎಸ್‌ಟಿ, ಇನ್ಸಾಲ್ವೆನ್ಸಿ ಇತ್ಯಾದಿ ಹಲವಾರು ರೀತಿಯ ಸುಧಾರಣೆಗಳನ್ನು ಕೈಗೊಂಡಿರುವುದನ್ನು ಮೋದಿ ತಿಳಿಸಿದರು.
ಬ್ಲೂಮ್‌ಬರ್ಗ್ ನ್ಯೂ ಎಕನಾಮಿ ಫೋರಂ ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ. ಅಕ್ಟೋಬರ್ 13ರಿಂದ 15ರವರೆಗೂ ಇರುವ ಇದರಲ್ಲಿ ಮೂರು ದಿನ ಹಲವಾರು ಸೆಷನ್ಗಳಿವೆ. ವಿವಿಧ ವಿಚಾರಗಳ ಮಂಡನೆ, ಚರ್ಚೆ, ಚಿಂತನ ಮಂಥನಗಳು, ಸಂದರ್ಶನಗಳು ನಡೆಯಲಿವೆ.
ಇದನ್ನೂ ಓದಿ: ಫ್ರಾಂಟಿಯರ್ ಮಾಡಲ್ಗಳ ಆಳ ಅಗಲ ಗೊತ್ತಿರೋದು 5,000 ಮಂದಿಗೆ ಮಾತ್ರವಾ? ಹೆಚ್ಚಿನ ಮಂದಿಗೆ ನಿಲುಕದ್ದಾಗಿದೆ ಎಐ ಸಾಮರ್ಥ್ಯ
ಬ್ಲೂಮ್‌ಬರ್ಗ್ ಈ ಹಿಂದೆ ಆರು ಬಾರಿ ಬೇರೆ ಬೇರೆ ಕಡೆ ಈ ಫೋರಂಗಳನ್ನು ನಡೆಸಿದೆ. 2025ರಲ್ಲಿ ಸಿಂಗಾಪುರದಲ್ಲಿ ನಡೆಸಲಾಗಿತ್ತು. ದೆಹಲಿಯಲ್ಲಿ ನಡೆಯುತ್ತಿರುವ ಬ್ಲೂಮ್‌ಬರ್ಗ್ ನ್ಯೂ ಎಕನಾಮಿ ಫೋರಂನಲ್ಲಿ ಹಲವು ಗಣ್ಯ ಉದ್ಯಮಿಗಳು, ಆರ್ಥಿಕ ತಜ್ಞರು ಚಿಂತಕರು ಪಾಲ್ಗೊಳ್ಳಲಿದ್ದಾರೆ. ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್, ಮಾಜಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ನಂದನ್ ನಿಲೇಕಣಿ, ನಿರ್ಮಲಾ ಸೀತಾರಾಮನ್, ಅಲೇನ್ ಎಬೋಬಿಸೆ, ಉದಯ್ ಕೋಟಕ್, ಕಿರಣ್ ಮಜುಮ್ದಾರ್ ಷಾ, ಅಶ್ವಿನಿ ವೈಷ್ಣವ್, ಪಿಯೂಶ್ ಗೋಯಲ್, ಯುವರಾಜ್ ನಾರಾಯಣ್, ಸಿಂಗಾಪುರ ಉಪಪ್ರಧಾನಿ ಕಿಮ್ ಯೋಂಗ್, ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್, ಸುನೀಲ್ ಮಿಟ್ಟಲ್ ಮೊದಲಾದವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

