ರೈತರಿಗೆ ಗುಡ್ನ್ಯೂಸ್ ಕೊಟ್ಟ ಜೋಶಿ; ಕಬ್ಬು ಬೆಳೆಗೆ ಎಂಎಸ್ಪಿ ನಿಗದಿ ಬಗ್ಗೆ ಬಿಗ್ ಅಪ್ಡೇಟ್ಸ್!
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಎಂಎಸ್ಪಿ ಸೇರಿದಂತೆ ಪ್ರಮುಖ ಬೇಡಿಕೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಎಥೆನಾಲ್ ಹೆಚ್ಚುವರಿ ಖರೀದಿಗೆ ಪೆಟ್ರೋಲಿಯಂ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಹಬ್ಬದ ವೇಳೆಗೆ ರೈತರು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ, ಅಕ್ಟೋಬರ್ 17: ದೆಹಲಿಯಲ್ಲಿ ನಡೆದ ರೈತರ ಸಭೆಯ ನಂತರ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ರೈತರ ಬೇಡಿಕೆಗಳನ್ನು ಪರಿಶೀಲಿಸಲು ತಜ್ಞರ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಎಂಎಸ್ಪಿ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಮಿತಿಯು ಧನಾತ್ಮಕ ಶಿಫಾರಸು ನೀಡಲಿದೆ.
ರೈತರು ಕೇಳಿರುವ ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಸಮಿತಿಯು ಧನಾತ್ಮಕವಾಗಿ ಪರಿಗಣಿಸಿ, ಶೀಘ್ರವಾಗಿ ಶಿಫಾರಸುಗಳನ್ನು ನೀಡುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಜೋಶಿ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆಗಳಿಲ್ಲದೆ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಕೇಂದ್ರ ಸರ್ಕಾರ ಖರೀದಿಸುತ್ತಿದ್ದು, ಕಳೆದ ವರ್ಷ 165 ಲೀಟರ್ ಎಥೆನಾಲ್ ಖರೀದಿಸಲಾಗಿದೆ. ಕಬ್ಬಿನಿಂದ ಬರುವ ಎಥೆನಾಲ್ ಪ್ರಮಾಣವನ್ನು ಹೆಚ್ಚುವರಿಯಾಗಿ ಖರೀದಿಸುವ ಕುರಿತು ಪೆಟ್ರೋಲಿಯಂ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು. ರೈತರು ಸಮಿತಿಯೊಂದಿಗೆ ಸಹಕರಿಸಬೇಕು ಮತ್ತು ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಜೋಶಿ ಮನವಿ ಮಾಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಮಾತನಾಡಿದ ಜೋಶಿ, ಮುಖ್ಯಮಂತ್ರಿಗಳು ರಾಜ್ಯ ಸಲಹಾ ಬೆಲೆ (SAP) ಪರಿಗಣಿಸಬೇಕು ಹಾಗೂ ತೂಕ ಮತ್ತು ಯಾಂತ್ರಿಕ ಕಟಾವಿನ ನಷ್ಟದ (ವೇಸ್ಟೇಜ್) ಸಮಸ್ಯೆಗಳನ್ನು ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಬ್ಬಿನ ನಷ್ಟ ಹೆಚ್ಚಿದ್ದು, ಅದನ್ನು ತಗ್ಗಿಸಲು ಫ್ಯಾಕ್ಟರಿಗಳಿಗೆ ಸೂಚಿಸಬೇಕು. ಮೋದಿ ಸರ್ಕಾರ ರೈತರ ಪರವಾಗಿದ್ದು, ಯಾವುದೇ ಚರ್ಚೆಗೆ ತಾವು ಸಿದ್ಧರಿದ್ದೇವೆ; ಹಬ್ಬದ ಸಮಯದಲ್ಲಿ ರೈತರು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಬೇಕೆಂದು ಅವರು ಭಾವನಾತ್ಮಕ ಮನವಿ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

