ಬೆಂಗಳೂರಿನಲ್ಲಿ 3-ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸವಾಗಿದ್ದ ಕುಟುಂಬಗಳು ಬೀದಿಪಾಲು
ಬದುಕಿಡೀ ದುಡಿದು ಸಂಪಾದಿಸಿದ್ದು ಕಣ್ಣೆದುರೇ ನೆಲದಲ್ಲಿ ಹೂತು ಹೋಗುತ್ತಿದ್ದರೆ ಅದನ್ನು ಸಹಿಸಿಕೊಳ್ಳುವುದು ಎಂಟೆದೆಯುಳ್ಳವರಿಗೂ ಸಾಧ್ಯವಾಗುವುದಿಲ್ಲ
ಇತ್ತೀಚಿಗೆ ನಾವು ಬೆಂಗಳೂರಿನಲ್ಲಿ ಸತತ ಮಳೆಯಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳ ಬಗ್ಗೆ ಚರ್ಚಿಸಿದ್ದೆವು. ನಗರದ ಕಮಲಾನಗರ ಪ್ರದೇಶದಲ್ಲಿ ಮೂರು ಅಂತಸ್ತು ಕಟ್ಟಡವೊಂದರ ಅಡಿಪಾಯ ಅದುರಿ ಇಡೀ ಕಟ್ಟಡವನ್ನೇ ನೆಲಸಮಗೊಳಿಸಬೇಕಾದ ಪ್ರಮೇಯ ಎದುರಾಗಿದ್ದರಿಂದ ಅದರಲ್ಲಿನ ಮನೆಗಳಲ್ಲಿ ವಾಸ ಮಾಡುತ್ತಿದ್ದ ಬಾಡಿಗೆದಾರರು ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಡಿಪಾಯ ಅದುರಿದ ಕೂಡಲೇ ಮನೆಗಳಲ್ಲಿದ್ದ ಜನರು ಭೀತಿಯಿಂದ ಹೊರಬಂದಿದ್ದಾರೆ. ಇಡೀ ಕಟ್ಟಡವೇ ಕುಸಿಯುವ ಸ್ಥಿತಿಯಲ್ಲಿದ್ದ ಕಾರಣ ಬಾಡಿಗೆದಾರರು ತಮ್ಮ ತಮ್ಮ ಸಾಮಾನಗಳನ್ನು ತಂದುಕೊಳ್ಳವುದಕ್ಕೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಿಟ್ಟಿಲ್ಲ.
ಕಣ್ಣೆದುರೇ ತಾವು ವಾಸವಾಗಿದ್ದ ಮನೆ ಮತ್ತು ಅದರಲ್ಲಿದ್ದ ಸಾಮಾನುಗಳು ನೆಲಸಮಗೊಳ್ಳವುದನ್ನು ಕೆಲವರು ಅಸಹಾಯಕರಾಗಿ ನೋಡುತ್ತಾ ನಿಂತರೆ, ಬೇರೆ ಕೆಲವರು ದುಃಖ ಮತ್ತು ಹತಾಷೆ ತಾಳಲಾಗದೆ ಜೋರಾಗಿ ಅಳುತ್ತಿದ್ದರು. ಈ ವಿಡಿಯೋ ನೋಡಿದರೆ ನಿಮಗೆ ಮನೆ ಕಳೆದುಕೊಂಡವರ ನೋವು ಅರ್ಥವಾಗುತ್ತದೆ. ಈ ಮಹಿಳೆಗೆ ಯಾತನೆ ತಡೆದುಕೊಳ್ಳವುದು ಸಾಧ್ಯವಾಗುತ್ತಿಲ್ಲ. ಇನ್ನೊಬ್ಬ ಮಹಿಳೆ ಅವರನ್ನು ಸಂತೈಸುವ ಪ್ರಯತ್ನ ಮಾಡುತ್ತಿರುವರಾದರೂ ಅದು ಸಾಧ್ಯವಾಗುತ್ತಿಲ್ಲ.
ಹೇಗೆ ಸಾಧ್ಯವಾದೀತು? ಬದುಕಿಡೀ ದುಡಿದು ಸಂಪಾದಿಸಿದ್ದು ಕಣ್ಣೆದುರೇ ನೆಲದಲ್ಲಿ ಹೂತು ಹೋಗುತ್ತಿದ್ದರೆ ಅದನ್ನು ಸಹಿಸಿಕೊಳ್ಳುವುದು ಎಂಟೆದೆಯುಳ್ಳವರಿಗೂ ಸಾಧ್ಯವಾಗುವುದಿಲ್ಲ. ಈ ಕಟ್ಟಡದಲ್ಲಿ ವಾಸವಾಗಿದ್ದವರು ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು. ತಮ್ಮ ಚಿಕ್ಕ ಪುಟ್ಟ ಆಸೆಗಳನ್ನು ತೀರಿಸಿಕೊಳ್ಳುವುದರಲ್ಲೇ ಆವರ ಆಯಸ್ಸು ಮುಗಿದು ಹೋಗುತ್ತದೆ. ಮಕ್ಕಳ ಓದು ಮದುವೆಗೆ ಆಂತ ಅವರು ಅರೆಹೊಟ್ಟೆ ತಿಂದು ಉಳಿಸಿದ ಹಣ, ಒಡವೆ, ಸಾಮಾನು-ಸರಂಜಾಮು, ಪಾತ್ರೆ-ಪಗಡೆ ಎಲ್ಲ ಅವರ ಕಣ್ಣುಗಳ ಮುಂದೆ ಮಣ್ಣು ಪಾಲಾಗುತ್ತಿರೋದನ್ನ ಬಡವರು ನೋಡಲು ಸಾಧ್ಯವೇ?
ಕರ್ನಾಟಕ ಸರ್ಕಾರ ಈ ಜನರ ನೋವಿಗೆ ಸ್ಪಂದಿಸುವ ಅವಶ್ಯಕತೆಯಿದೆ. 5,000-10,000 ಪರಿಹಾರ ಧನ ನೀಡಿ ಕೈ ತೊಳೆದುಕೊಂಡರೆ ಸಾಲದು. ಎಲ್ಲವನ್ನು ಕಳೆದುಕೊಂಡ ಅವರ ಬದುಕುಗಳನ್ನು ಮತ್ತೊಮ್ಮೆ ರೂಪಿಸಬೇಕಿದೆ.
ಯಾವುದಾದರೂ ಯೋಜನೆಯೊಂದರಲ್ಲಿ ಅವರಿಗೆ ವಸತಿ ಸೌಕರ್ಯ ಕಲ್ಪಿಸುವ ಕೆಲಸ ಮೊದಲು ಆಗಬೇಕು. ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು.
ಇದನ್ನೂ ಓದಿ: Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು