ಗಂಗಾ-ಕೋಸಿ ನದಿಗಳ ರುದ್ರನರ್ತನ: ಬಿಹಾರದ ಕಟಿಹಾರ್‌ನಲ್ಲಿ ಪ್ರವಾಹದ ಅಬ್ಬರ, ನೂರಾರು ಹಳ್ಳಿಗಳು ಜಲಾವೃತ
ನೇಪಾಳ ಮತ್ತು ಬಿಹಾರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಂಗಾ ಹಾಗೂ ಕೋಸಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಟಿಹಾರ್ ಜಿಲ್ಲೆಯಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುರ್ಸೇಲಾ, ಬರಾರಿ, ಮಣಿಹಾರಿ ಮತ್ತು ಅಮದಾಬಾದ್ ಸೇರಿದಂತೆ ಪ್ರಮುಖ ಬ್ಲಾಕ್‌ಗಳ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದ್ದು, ನೂರಾರು ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಕಟಿಹಾರ್ , ಸೆಪ್ಟೆಂಬರ್ 06: ನೇಪಾಳ ಮತ್ತು ಬಿಹಾರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಂಗಾ ಹಾಗೂ ಕೋಸಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಟಿಹಾರ್ ಜಿಲ್ಲೆಯಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುರ್ಸೇಲಾ, ಬರಾರಿ, ಮಣಿಹಾರಿ ಮತ್ತು ಅಮದಾಬಾದ್ ಸೇರಿದಂತೆ ಪ್ರಮುಖ ಬ್ಲಾಕ್‌ಗಳ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದ್ದು, ನೂರಾರು ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ರಸ್ತೆಗಳು 4 ರಿಂದ 5 ಅಡಿ ನೀರಿನಲ್ಲಿ ಮುಳುಗಡೆಯಾಗಿದ್ದು, ಗ್ರಾಮಗಳ ನಡುವಿನ ಸಂಪರ್ಕ ಕಡಿದುಹೋಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತ ಜನರು ತಮ್ಮ ಜಾನುವಾರು ಮತ್ತು ಅಗತ್ಯ ವಸ್ತುಗಳೊಂದಿಗೆ ಎತ್ತರದ ಪ್ರದೇಶಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳತ್ತ ವಲಸೆ ಹೋಗುತ್ತಿದ್ದಾರೆ. ಜನರಿಗೆ ಸಂಚಾರಕ್ಕೆ ದೋಣಿಗಳೇ ಏಕೈಕ ಆಸರೆಯಾಗಿವೆ. ಕುಡಿಯುವ ನೀರು ಮತ್ತು ಮೇವಿನ ತೀವ್ರ ಕೊರತೆ ಎದುರಾಗಿದ್ದು, ಸಂತ್ರಸ್ತರಿಗೆ ನೆರವು ನೀಡಲು ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಜಿಲ್ಲಾಡಳಿತವು ನಿರಾಶ್ರಿತರಿಗೆ ಸಮುದಾಯ ಅಡುಗೆ ಮನೆಗಳನ್ನು ಆರಂಭಿಸಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದೆ. ಕೇವಲ ಕಟಿಹಾರ್ ಮಾತ್ರವಲ್ಲದೆ ಪಾಟ್ನಾ, ಭಾಗಲ್ಪುರ, ಬಕ್ಸರ್, ವೈಶಾಲಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

