ಸೂರಣಗಿ ದುರಂತ: ಸೂತಕದ ಮನೆಯಲ್ಲಿ ರಾಜಕಾರಣಕ್ಕೆ ಮುಂದಾದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ
ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಂದ್ರುಗೆ ಸಂವೇದನೆ, ಪರಿಜ್ಞಾನ ಇಲ್ಲವೇ? ಅವರು ನೀಡುತ್ತಿರುವ ಹಣದ ಮೊತ್ತದ ಬಗ್ಗೆ ನಾವು ಖಂಡಿತ ಮಾತಾಡುತ್ತಿಲ್ಲ, ಆ ವಿಷಯದಲ್ಲಿ ಅಪಾರ್ಥ ಬೇಡ. ಶಾಸಕರೇ, ಶೋಕತಪ್ತ ಕುಟುಂಬಗಳಿಗೆ ಈಗ ಅಗತ್ಯವಿರೋದು ನಿಮ್ಮ ಹಣವಲ್ಲ; ಸಾಂತ್ವನ, ಸಮಾಧಾನ ಮತ್ತು ಕಣ್ಣೀರೊರೆಸುವ ಕೈಗಳು.
ಗದಗ: ಸೂತಕದ ಮನೆಯಲ್ಲಿ ಇಂಥ ಘಟನೆಗಳೂ ನಡೆಯುತ್ತವೆ. ನಾವು ದಿನವಿಡೀ ವರದಿ ಮಾಡಿದ ಹಾಗೆ ಲಕ್ಷ್ಮೇಶ್ವರ ಬಳಿಯ ಸೂರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ (Yash birthday) ಪ್ರಯುಕ್ತ ಕಟೌಟ್ ಕಟ್ಟುವಾಗ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಮೂವರು ಯುವಕರು ದಾರುಣ ಸಾವನ್ನಪ್ಪಿದರು. ಮೂವರ ಕುಟುಂಬಗಳನ್ನು ಸಂತೈಸಲು ಬಂದ ಶಿರಹಟ್ಟಿಯ ಬಿಜೆಪಿ ಶಾಸಕ ಡಾ ಚಂದ್ರು ಲಮಾಣಿ (Dr Chandru Lamani) ಏನು ಮಾಡುತ್ತಿದ್ದಾರೆ ಅನ್ನೋದನ್ನು ಸ್ವಲ್ಪ ಗಮನಿಸಿ. ಯುವ ಮತ್ತು ತಮ್ಮ ಕುಟುಂಬಗಳಿಗೆ ಅನ್ನ ದುಡಿದು ಹಾಕುತ್ತಿದ್ದ ಮಕ್ಕಳನ್ನು ಕಳೆದುಕೊಂಡು ಒಂದೇ ಸಮನೆ ಗೋಳಾಡುತ್ತಿರುವ ಕುಟುಂಬಗಳಿಗೆ ಅವರು ಎಲ್ಲರೆದುರು ಚೆಕ್ ಮೂಲಕ ಹಣ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಂದ್ರುಗೆ ಸಂವೇದನೆ, ಪರಿಜ್ಞಾನ ಇಲ್ಲವೇ? ಅವರು ನೀಡುತ್ತಿರುವ ಹಣದ ಮೊತ್ತದ ಬಗ್ಗೆ ನಾವು ಖಂಡಿತ ಮಾತಾಡುತ್ತಿಲ್ಲ, ಆ ವಿಷಯದಲ್ಲಿ ಅಪಾರ್ಥ ಬೇಡ.
ಆದರೆ, ಹಣ ನೀಡಲು ಇದು ಸೂಕ್ತ ಸಮಯವೇ? ಕೆಮೆರಾಗಳ ಮುಂದೆ ಇದನ್ನೆಲ್ಲ ಮಾಡುವ ಅವಶ್ಯಕತೆ ಇತ್ತೇ? ಕುಟುಂಬದವರ ದುಃಖ ಶಮನಗೊಂಡ ಬಳಿಕ ಅವರ ಮನೆಗಳಿಗೆ ಹೋಗಿ ಚೆಕ್ ನೀಡಬಹುದಿತ್ತಲ್ಲವೇ? ಕೆಮೆರಾಗಳ ಮುಂದೆ ಔದಾರ್ಯತೆಯ ನಾಟಕ ಯಾಕೆ? ಶಾಸಕರೇ, ಶೋಕತಪ್ತ ಕುಟುಂಬಗಳಿಗೆ ಈಗ ಅಗತ್ಯವಿರೋದು ನಿಮ್ಮ ಹಣವಲ್ಲ. ಸಾಂತ್ವನ ಮತ್ತು ಸಮಾಧಾನ ಹೇಳುವವರ ಅವಶ್ಯಕತೆ ಅವರಿಗಿದೆ. ನೀವು ಎಷ್ಟೇ ದುಡ್ಡು ಕೊಟ್ಟರೂ ಅವರಿಗೆ ತಮ್ಮ ಮಕ್ಕಳು ಸಿಗಲ್ಲ. ಸೂತಕದ ಮನೆಯಲ್ಲಿ ರಾಜಕಾರಣ ಯಾಕೆ ಮಾರಾಯ್ರೇ?
ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ