ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!

ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ರಮೇಶ್ ಬಿ. ಜವಳಗೇರಾ

Updated on: Nov 15, 2024 | 4:39 PM

ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ. ಇನ್ನು ಈ ಸಂಬಂಧ ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆಎಸ್​​ ಈಶ್ವರಪ್ಪ ವಿರುದ್ಧ ಕೇಸ್​ ಬುಕ್ ಆಗಿದೆ.

ಶಿವಮೊಗ್ಗ, (ನವೆಂಬರ್ 15): ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ದ ಮಾತನಾಡಿದ್ದ ಮಾಜಿ ಉಪಮುಖ್ಯಮಂತ್ರಿ ಕೆಎಸ್​ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ. ನವೆಂಬರ್ 13 ರಂದು ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಕ್ಫ್​ ವಿಚಾರವಾಗಿ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

ವಕ್ಫ್​ ಆಸ್ತಿ ವಿವಾದ ವಿಚಾರದ ಬಗ್ಗೆ ನವೆಂಬರ್ 13ರಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಪ್ಪ. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಮುಸ್ಲಿಂರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಅಂತೆಲ್ಲಾ ಮಾತನಾಡಿದ್ದರು. ಈ ಸಂಬಂಧ ಇದೀಗ ಈಶ್ವರಪ್ಪ ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂದು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸುಮೋಟೋ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.