ಪ್ರವಾಹಕ್ಕೆ ಉತ್ತರಕಾಶಿ ತತ್ತರ; ಹರ್ಸಿಲ್‌ನ ಸೇನಾ ಶಿಬಿರದಿಂದ 10 ಸೈನಿಕರು ನಾಪತ್ತೆ
ಉತ್ತರಕಾಶಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೆಳ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರದಿಂದ 8-10 ಭಾರತೀಯ ಸೈನಿಕರು ಕಾಣೆಯಾಗಿದ್ದಾರೆ. ಇದರ ಹೊರತಾಗಿಯೂ, ಭಾರತೀಯ ಸೇನಾ ಪಡೆಗಳು ಸಕ್ರಿಯವಾಗಿ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದ ಸೈನಿಕರನ್ನು ಸೇರಿದಂತೆ ಉಳಿದ 50ಕ್ಕೂ ಹೆಚ್ಚು ಜನರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಉತ್ತರಕಾಶಿ, ಆಗಸ್ಟ್ 5: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi Cloudburst) ಇಂದು ಸಂಭವಿಸಿದ ವಿನಾಶಕಾರಿ ಮೇಘಸ್ಫೋಟದಲ್ಲಿ 4 ಜನರು ಮೃತಪಟ್ಟಿದ್ದಾರೆ, 50ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಅವರಲ್ಲಿ ಇಲ್ಲಿನ ಹರ್ಸಿಲ್ ಪ್ರದೇಶದ ಸೇನಾ ಶಿಬಿರದಲ್ಲಿನ 8ರಿಂದ 10 ಭಾರತೀಯ ಸೈನಿಕರು (Indian Soldiers) ಕೂಡ ಸೇರಿದ್ದಾರೆ. ಕೆಳ ಹರ್ಸಿಲ್ ಪ್ರದೇಶದ ಶಿಬಿರದಲ್ಲಿ ಯಾರೂ ಪತ್ತೆಯಾಗಿಲ್ಲ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮದೇ ಸಿಬ್ಬಂದಿಯನ್ನು ಕಳೆದುಕೊಂಡಿದ್ದರೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಪಡೆಗಳು ಹುಡುಕಾಟ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಉತ್ತರಕಾಶಿಯ ಖೀರ್ ಗಡ್ ಬಳಿಯ ಧರಾಲಿ ಗ್ರಾಮ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಮೇಘಸ್ಫೋಟ ಸಂಭವಿಸಿದ್ದು, ಒಂದೇ ಬಾರಿ ಭಾರೀ ಪ್ರಮಾಣದ ನೀರು, ಬಂಡೆಗಳು ಮತ್ತು ಶಿಲಾಖಂಡರಾಶಿಯೇ ಗ್ರಾಮದೊಳಗೆ ನುಗ್ಗಿದೆ. ಪ್ರವಾಹದ ನೀರು ಮತ್ತು ಮಣ್ಣು ಬೆಟ್ಟದ ಇಳಿಜಾರಿನಲ್ಲಿ ನುಗ್ಗಿದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಹಲವಾರು ಮನೆಗಳು ಸಂಪೂರ್ಣವಾಗಿ ಕೆಸರಿನ ಅಡಿಯಲ್ಲಿ ಹೂತುಹೋಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

