Virat Kohli: ಅದೇ ರಾಗ ಅದೇ ಹಾಡು… ಒಂದೇ ರೀತಿ 6 ಬಾರಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ
India vs Australia: ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈವರೆಗೆ 7 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಕಲೆಹಾಕಿರುವುದು ಕೇವಲ 167 ರನ್ಗಳು ಮಾತ್ರ. ಅದರಲ್ಲೂ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿರುವ ಮೆಲ್ಬೋರ್ನ್ ಟೆಸ್ಟ್ನಲ್ಲಿ ಕೇವಲ 5 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಬಾರಿಯ ಸರಣಿಯಲ್ಲಿ ವಿರಾಟ್ ಕೊಹ್ಲಿ ಹೀಗೆ ವಿಕೆಟ್ ಹಿಂದೆ ಕ್ಯಾಚ್ ನೀಡುತ್ತಿರುವುದು ಇದು 6ನೇ ಬಾರಿ.
ಈ ಬಾರಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 7 ಬಾರಿ ಬ್ಯಾಟ್ ಬೀಸಿದ್ದಾರೆ. ಈ ಏಳು ಬಾರಿಯಲ್ಲಿ 6 ಬಾರಿ ಒಂದೇ ರೀತಿಯಲ್ಲಿ ಔಟ್ ಆಗಿರುವುದು ವಿಶೇಷ. ಅಂದರೆ ಈ ಬಾರಿಯ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರತಿ ಬಾರಿ ಕೂಡ ವಿಕೆಟ್ ಒಪ್ಪಿಸಿದ್ದು ವಿಕೆಟ್ ಹಿಂದೆ ಎಂಬುದು ವಿಶೇಷ.
ಒಂದಾದರೆ ವಿಕೆಟ್ ಕೀಪರ್ಗೆ, ಇಲ್ಲ ಸ್ಲಿಪ್ ಫೀಲ್ಡರ್ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಇದು ನಿರ್ಣಾಯಕವಾಗಿ ಮೆಲ್ಬೋರ್ನ್ ಟೆಸ್ಟ್ನಲ್ಲೂ ಮುಂದುವರೆದಿದೆ. ಭಾರತ ತಂಡದ ದ್ವಿತೀಯ ಇನಿಂಗ್ಸ್ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ (5) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಉಸ್ಮಾನ್ ಖ್ವಾಜಾಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.
ಇದಕ್ಕೂ ಮುನ್ನ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಹ್ಯಾಝಲ್ವುಡ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಇನ್ನು ಅಡಿಲೇಡ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಟಾರ್ಕ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದರೆ, ದ್ವಿತೀಯ ಇನಿಂಗ್ಸ್ನಲ್ಲಿ ಬೋಲ್ಯಾಂಡ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತಿದ್ದರು.
ಇನ್ನು ಬ್ರಿಸ್ಬೇನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿದ್ದ ಕೊಹ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಬೋಲ್ಯಾಂಡ್ ಎಸೆತದಲ್ಲಿ ಅದೇ ಮಾದರಿಯಲ್ಲಿ ಔಟಾಗಿದ್ದರು.
ಹಾಗೆಯೇ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ದರು. ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಮತ್ತೆ ಸ್ಟಾರ್ಕ್ ಎಸೆತದಲ್ಲಿ ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಔಟಾಗದೇ ಉಳಿದಿರುವುದು ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಮಾತ್ರ. ಆ ಇನಿಂಗ್ಸ್ನಲ್ಲಿ 100 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಇದನ್ನು ಹೊರತುಪಡಿಸಿ ಉಳಿದ 6 ಇನಿಂಗ್ಸ್ಗಳಲ್ಲೂ ಕೊಹ್ಲಿ ವಿಕೆಟ್ ಹಿಂದೆ ಕ್ಯಾಚ್ ನೀಡುವ ಇನಿಂಗ್ಸ್ ಅಂತ್ಯಗೊಳಿಸಿರುವುದು ಅಚ್ಚರಿಯೇ ಸರಿ.