Greek Earthquake: ಗ್ರೀಕ್ನ ದ್ವೀಪದಲ್ಲಿ ಪ್ರಬಲ ಭೂಕಂಪ; ಒಬ್ಬ ಸಾವು, 9 ಜನರಿಗೆ ಗಾಯ
ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್ ರಾಜಧಾನಿ ಅಥೆನ್ಸ್ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ.
ಗ್ರೀಕ್ನ ಕ್ರೀಟ್ ದ್ವೀಪ (Greek Earthquake)ದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸುಮಾರು 9 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಮನೆಗಳು, ಚರ್ಚೆಗಳು ಕುಸಿದಿದ್ದು, ಕಲ್ಲುಬಂಡೆಗಳೆಲ್ಲ ಒಡೆದುಬಿದ್ದಿವೆ. ಅರ್ಕಲೋಹರಿ ಗ್ರಾಮದಲ್ಲಿರುವ ಚರ್ಚ್ವೊಂದು ಕುಸಿದುಬಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಗಾಯಗೊಂಡ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾಗಿದೆ. ಹೆರಾಕ್ಲಿಯನ್ ನಗರದಲ್ಲಿ ಭೂಮಿ ನಡುಗುತ್ತಿದ್ದಂತೆ ಜನರೆಲ್ಲ ಬೀದಿಗೆ ಓಡಿದ್ದಾರೆ. ಶಾಲೆಗಳನ್ನು ಮುಚ್ಚಿ, ಮಕ್ಕಳಿಗೆ ಮನೆಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ.
ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್ ರಾಜಧಾನಿ ಅಥೆನ್ಸ್ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ. ನಾವು ಹಲವು ತಿಂಗಳುಗಳಿಂದ ಈ ಪ್ರದೇಶವನ್ನು ಗಮನಿಸುತ್ತಿದ್ದೇವೆ. ಈಗ ಸಂಭವಿಸಿದ ಭೂಕಂಪದ ಬಗ್ಗೆ ಹಿಂದೆಯೇ ಎಚ್ಚರಿಕೆಯನ್ನೂ ನೀಡಿದ್ದೆವು. ಇಂದಿನ ಭೂಕಂಪ ಸಾಗರದ ಅಡಿಯಿಂದ ಆಗಿದ್ದಲ್ಲ, ಭೂಮಿಯಡಿಯಲ್ಲೇ ಆಗಿದೆ. ಜನರಿಗೆ ತೊಂದರೆಯನ್ನುಂಟು ಮಾಡಿದೆ ಎಂದು ಗ್ರೀಸ್ನ ಭೂಕಂಪಶಾಸ್ತ್ರಜ್ಞ ಗೆರಾಸಿಮೊಸ್ ಪಾಪಡೋಪೌಲೋಸ್ ಹೇಳಿದ್ದಾರೆ.
ಇದೀಗ ಗ್ರೀಕ್ನ ದ್ವೀಪದಲ್ಲಿ ಉಂಟಾದ ಭೂಕಂಪದ ತೀವ್ರತೆಯನ್ನು ವಿವಿಧ ಭೂಕಂಪನಶಾಸ್ತ್ರ ಕೇಂದ್ರಗಳು ಬೇರೆಬೇರೆ ರೀತಿಯಲ್ಲಿ ದಾಖಲಿಸಿವೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ ಇಂದು ಕ್ರೀಟ್ ದ್ವೀಪದಲ್ಲಿ 6.5ರಷ್ಟು ತೀವ್ರತೆಯ ಭೂಕಂಪವಾಗಿದೆ. ಹಾಗೇ, ಇಲ್ಲಿ 6.0ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ ಎಮದು ಯುಎಸ್ನ ಜಿಲಾಜಿಕಲ್ ಸರ್ವೇ ಹೇಳಿದೆ. ಹಾನಿಗೊಳಗಾದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
(1 dead after strong earthquake hits Greek island of Crete homes and churches damaged)