ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 12 ಸೈನಿಕರ ಸಾವು
ಮಂಗಳವಾರ ನಡೆದ ದಾಳಿಯ ವೇಳೆ ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಪಾಕಿಸ್ತಾನದ ಉತ್ತರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹೊರಠಾಣೆಯ ಗೋಡೆಗೆ ಡಿಕ್ಕಿ ಹೊಡೆಸಿದ್ದಾರೆ. ಇದರಿಂದ ಆ ಕಟ್ಟದ ಸುತ್ತಮುತ್ತಲಿನ ಜಾಗ ಕೂಡ ಸ್ಫೋಟಗೊಂಡು ಹಾನಿಗೊಳಗಾಗಿದೆ. ಹಫೀಜ್ ಗುಲ್ ಬಹದ್ದೂರ್ ಗ್ರೂಪ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್‌ನ ಬಣವು ಈ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಖೈಬರ್ ಪಖ್ತುಂಖ್ವಾ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚೆಕ್ ಪೋಸ್ಟ್‌ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ 12 ಭದ್ರತಾ ಸಿಬ್ಬಂದಿ ಮತ್ತು 6 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ಇಂದು ತಿಳಿಸಿದೆ. ಮಂಗಳವಾರ ತಡರಾತ್ರಿ ಬನ್ನು ಜಿಲ್ಲೆಯ ಮಾಲಿಖೇಲ್ ಸಾಮಾನ್ಯ ಪ್ರದೇಶದಲ್ಲಿರುವ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ಚೆಕ್ ಪೋಸ್ಟ್ ಪ್ರವೇಶಿಸುವ ಅವರ ಪ್ರಯತ್ನವನ್ನು ಸೇನಾಪಡೆಗಳು ಪರಿಣಾಮಕಾರಿಯಾಗಿ ವಿಫಲಗೊಳಿಸಿದವು ಎನ್ನಲಾಗಿದೆ.
ಆದರೂ ಸತತ ಪ್ರಯತ್ನದ ನಂತರ ಈ ದಾಳಿ ನಡೆಸಲಾಯಿತು. ಆತ್ಮಹತ್ಯಾ ಬಾಂಬ್ ಸ್ಫೋಟವು ಸುತ್ತಲಿನ ಗೋಡೆಯ ಒಂದು ಭಾಗದ ಕುಸಿತಕ್ಕೆ ಕಾರಣವಾಯಿತು. ಇದು ಸುತ್ತಮುತ್ತಲಿನ ಸ್ಥಳಗಳನ್ನು ಹಾನಿಗೊಳಿಸಿತು. ಇದರ ಪರಿಣಾಮವಾಗಿ ಭದ್ರತಾ ಪಡೆಗಳ 12 ಸೈನಿಕರು ಸಾವನ್ನಪ್ಪಿದರು ಎಂದು ಪಾಕ್ ಸೇನೆ ಹೇಳಿದೆ. ನಂತರದ ಶೂಟೌಟ್ನಲ್ಲಿ 6 ಉಗ್ರರು ಕೂಡ ಸಾವನ್ನಪ್ಪಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಗಯಾನಾದಲ್ಲಿ ಭಾರತೀಯ ವಲಸಿಗರಿಂದ ಅದ್ದೂರಿ ಸ್ವಾಗತ
ಈ ತಿಂಗಳ ಆರಂಭದಲ್ಲಿ ನವೆಂಬರ್ 9ರಂದು ಕ್ವೆಟ್ಟಾದಲ್ಲಿ ರೈಲ್ವೆ ನಿಲ್ದಾಣದ ಸ್ಫೋಟದಲ್ಲಿ 14 ಪಾಕಿಸ್ತಾನಿ ಸೈನಿಕರು ಸೇರಿದಂತೆ 25 ಜನರು ಸಾವನ್ನಪ್ಪಿದ್ದರು. ಬಲೂಚಿಸ್ತಾನ್ ರಾಜಧಾನಿಯ ಮುಖ್ಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ ಈ ಸ್ಫೋಟ ಸಂಭವಿಸಿತ್ತು. ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಸೆಕ್ಯುರಿಟಿ ಸ್ಟಡೀಸ್ (CRSS) 2024ರ ಮೂರನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ ಶೇ. 90ರಷ್ಟು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.
ಇಂದು ಪಾಕಿಸ್ತಾನದ ಪಿಎಂ ಶೆಹಬಾಜ್ ಷರೀಫ್ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಹೊಸ ಮಿಲಿಟರಿ ಆಕ್ರಮಣವನ್ನು ಘೋಷಿಸಿದರು. ಇದು ಖೈಬರ್ ಪಖ್ತುನ್ಖ್ವಾ ಗಡಿಯಲ್ಲಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ