
ದುಬೈ ಆಗಸ್ಟ್ : ಯುಎಇಯ ದುಬೈನ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಮುಂಜಾನೆ ಕೇವಲ 20 ನಿಮಿಷಗಳ ಅಂತರದಲ್ಲಿ ಕನಿಷ್ಠ 7 ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ (Iran) ಮಾಧ್ಯಮಗಳು ವರದಿ ಮಾಡಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಮುಗಿಲೆತ್ತರಕ್ಕೆ ಭಾರಿ ಪ್ರಮಾಣದ ಕಪ್ಪು ಹೊಗೆ ಚಿಮ್ಮುತ್ತಿರುವುದು ಕಂಡುಬಂದಿದೆ. ಇರಾನ್ನ ಮೆಹ್ರ್ ಸುದ್ಧಿ ಸಂಸ್ಥೆಯು ಎಮಿರೇಟಿ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಘಟನೆಯನ್ನು ವರದಿ ಮಾಡಿದೆ.
ಈ ಘಟನೆಯಲ್ಲಿ ಆಗಿರುವ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸ್ಫೋಟ ಮತ್ತು ಅದರಿಂದ ಉಂಟಾದ ಭಾರಿ ಬೆಂಕಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಘಟನೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ ಇಬ್ಬರನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್ ವಿರುದ್ಧ ಗುಡುಗಿದ ಟ್ರಂಪ್
ಯೆಮೆನ್ನಿಂದ ನಡೆಸಲಾದ ಕ್ಷಿಪಣಿ ದಾಳಿಯೇ ಈ ಸ್ಫೋಟಗಳಿಗೆ ಕಾರಣ ಎನ್ನಲಾಗಿದೆ. ಆದರೆ, ಈ ಘಟನೆಗೆ ಸೂಕ್ತ ಕಾರಣವೇನೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಇದೇ ವೇಳೆ, ಜೆಬೆಲ್ ಅಲಿ ಬಂದರಿನ ಪಕ್ಕದಲ್ಲಿರುವ ಇಂಧನ ಸಂಗ್ರಹಣೆ ಮತ್ತು ಸಾಗಣೆಗೆ ಬಳಸಲಾಗುವ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ನಾಸಾ (NASA) ತಾಪಮಾನ ಇಮೇಜಿಂಗ್ ಪತ್ತೆ ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟ ನಡೆದ ಸಮಯದಲ್ಲೇ ಯೆಮೆನ್ ರಾಜಧಾನಿ ಸನಾದಲ್ಲೂ ಭಾರಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಇವು ವೈಮಾನಿಕ ದಾಳಿಯ ಸದ್ದು ಎಂದು ಕೆಲವು ವರದಿಗಳು ಹೇಳಿದ್ದರೆ, ಇನ್ನು ಕೆಲವು ಮೂಲಗಳು ಯೆಮೆನ್ ಭೂಪ್ರದೇಶದಿಂದ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿವೆ.
ಇದನ್ನೂ ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು
ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ ನಡುವಿನ ಸಂಘರ್ಷದಿಂದಾಗಿ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿದ್ದು, ಗಲ್ಫ್ ಪ್ರದೇಶದಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಯುಎಇ ಅಧಿಕಾರಿಗಳು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ