ಅಮೆರಿಕದಲ್ಲಿ 12-ವರ್ಷದ ಬಾಲಕಿಯೊಬ್ಬಳು ಗೆಳತಿಯೊಂದಿಗೆ ಒಪ್ಪಂದ ಮಾಡಿಕೊಂಡು ತನ್ನಪ್ಪನ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಪ್ರಯತ್ನಿದ್ದಾಳೆ!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ವೆದರ್ರ್ಫೋರ್ಡ್ ಪಟ್ಟಣದ ನಿವಾಸಿಯಾಗಿರುವ ಬಾಲಕಿ ಹಲವು ವಾರಗಳಿಂದ ತನ್ನ ಕುಟುಂಬ ಮತ್ತು ಸಾಕುಪ್ರಾಣಿಗಳನ್ನು ಕೊಲ್ಲುವ ಪ್ಲ್ಯಾನ್ ಮಾಡುತ್ತಿದ್ದಳಂತೆ.
ಇದನ್ನು ಹುಚ್ಚು ಅನ್ನಬೇಕೋ ಅಥವಾ ವೆಬ್ ಸಿರೀಸ್ ಗಳ ಪ್ರಭಾವ ಅನ್ನಬೇಕೋ ಗೊತ್ತಾಗುತ್ತಿಲ್ಲ ಮಾರಾಯ್ರೇ. ಅಮೆರಿಕದ ಟೆಕ್ಸಾಸ್ (Texas) ರಾಜ್ಯದಲ್ಲಿರುವ ಪಾರ್ಕರ್ ಕೌಂಟಿ (Parker County) ಎಂಬಲ್ಲಿ ಒಬ್ಬ 12 ವರ್ಷದ ಹುಡುಗಿ ತನಗೆ ಜನ್ಮ ನೀಡಿದ ತಂದೆಗೆ ಮನೆಯಲ್ಲಿ ಗುಂಡಿಕ್ಕಿ ಹೊರಗೋಡಿ ಬಂದು ಅವಳ ಮನೆಯಿರುವ ಓಣಿಯಲ್ಲಿ ಅದೇ ಪಿಸ್ಟಲ್ ನಿಂದ (pistol) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ! ಅವಳು ಇದನ್ನೆಲ್ಲ ಮಾಡಿದ್ದು ಯಾಕೆ ಗೊತ್ತಾ? ಇದೇ ವಯಸ್ಸಿನ ಪಕ್ಕದೂರಿನ ಹುಡುಗಿ ಮತ್ತು ನಮ್ಮ ಕಥಾನಾಯಕಿ ನಡುವೆ ಒಂದು ಒಪ್ಪಂದ ಅಗಿತ್ತಂತೆ. ಇಬ್ಬರೂ ತಮ್ಮ ಕುಟುಂಬ ಸದಸ್ಯರು ಮತ್ತು ಮನೆಯಲ್ಲಿನ ಸಾಕು ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲುವುದು!!
ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಾಲಕಿ ಬಿದ್ದಿದ್ದ ಸ್ಥಳಕ್ಕೆ ಪೊಲೀಸರನ್ನು ಕೂಡಲೇ ಕರೆಸಲಾಗಿದೆ. ಗುಂಡು ಅವಳ ತಲೆಯನ್ನು ಹೊಕ್ಕಿದೆ, ಎಂದು ಪೊಲೀಸರು ಹೇಳಿದ್ದಾರೆ. ಅವಳ ಪಕ್ಕದಲ್ಲೇ ಗನ್ ಪತ್ತೆಯಾಗಿದೆ. ಅವಳ 38-ವರ್ಷದ ತಂದೆ ಕುಟುಂಬದ ಮನೆಯ ಕೋಣೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಮತ್ತು ಅವರ ಹೊಟ್ಟೆಭಾಗದಿಂದ ರಕ್ತಸ್ರಾವಾಗುತ್ತಿರುವುದನ್ನು ಪೊಲೀಸರು ಕಂಡಿದ್ದಾರೆ. ಇಬ್ಬರನ್ನೂ ಏರ್ ಅಂಬ್ಯುಲೆನ್ಸ್ ಒಂದರ ಮೂಲಕ ಆಸ್ಪತ್ರೆಗೆಯೊಂದಕ್ಕೆ ಕರೆದೊಯ್ದು ಅಡ್ಮಿಟ್ ಮಾಡಲಾಗಿದೆ.
ಬಾಲಕಿಯರು ಅಪ್ರಾಪ್ತರಾಗಿರುವುದರಿಂದ ಅವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ವೆದರ್ರ್ಫೋರ್ಡ್ ಪಟ್ಟಣದ ನಿವಾಸಿಯಾಗಿರುವ ಬಾಲಕಿ ಹಲವು ವಾರಗಳಿಂದ ತನ್ನ ಕುಟುಂಬ ಮತ್ತು ಸಾಕುಪ್ರಾಣಿಗಳನ್ನು ಕೊಲ್ಲುವ ಪ್ಲ್ಯಾನ್ ಮಾಡುತ್ತಿದ್ದಳಂತೆ. ಅವಳ ಜೊತೆ ಒಪ್ಪಂದ ಮಾಡಿಕೊಂಡ ಮತ್ತೊಬ್ಬ ಬಾಲಕಿ ಲುಫ್ಕಿನ್ ಪಟ್ಟಣದ ನಿವಾಸಿಯಾಗಿದ್ದು ಅವಳು ಸಹ ತನ್ನ ತಂದೆ ಕೊಲ್ಲುವ ಯೋಚನೆ ಮಾಡಿದ್ದಳಂತೆ. ಆದರೆ ಅವಳಿಗೆ ಧೈರ್ಯ ಸಾಕಾಗಿಲ್ಲ.
ಪಾರ್ಕರ್ ಕೌಂಟಿಯ ಪೊಲೀಸ್ ಅಧಿಕಾರಿಯೊಬ್ಬರು ಆನ್ಲೈನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆ ಪ್ರಕಾರ ಬಾಲಕಿಯರ ಜೋಡಿಯು ತಮ್ಮ ತಮ್ಮ ಮನೆಗಳಲ್ಲಿ ಕೊಲೆಗಳನ್ನು ಮಾಡಿದ ನಂತರ ಜೊತೆಯಾಗಿ ಜಾರ್ಜಿಯಾಗೆ ಪಲಾಯನ ಮಾಡುವ ಪ್ಲ್ಯಾನ್ ಮಾಡಿದ್ದರಂತೆ.
ಲುಫ್ಕಿನ್ ಪೊಲೀಸರು ಸಹ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಬಾಲಕಿ (ಎರಡನೇಯವಳು) ವಿರುದ್ಧ ಹತ್ಯೆ ನಡೆಸಲು ಕ್ರಿಮಿನಲ್ ಕುತಂತ್ರ ರೂಪಿಸಿದ ಆರೋಪವನ್ನು ದಾಖಲಿಸಿಕೊಂಡಿದ್ದಾರೆ.
‘ತೀವ್ರ ಸ್ವರೂಪದ ಗಾಯಗಳು, ಬಾಲಕಿಯರ ವಯಸ್ಸು ಮತ್ತು ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಮಿತ ಮಾಹಿತಿಯನ್ನು ಬಿಡುಗಡೆ ಮಾಡಿದ್ದೇವೆ,’ ಅಂತ ಪಾರ್ಕರ್ ಕೌಂಟಿಯ ಪೊಲೀಸ್ ಅಧಿಕಾರಿ ರಸ್ ಆಥಿಯರ್ ಹೇಳಿದ್ದಾರೆ.