ಜಕಾರ್ತಾ: ಇಂಡೋನೇಷ್ಯಾದ (Indonesia)ಜಾವಾ ದ್ವೀಪದಲ್ಲಿ ಶುಕ್ರವಾರ 6.6 ತೀವ್ರತೆಯ ಭೂಕಂಪ (earthquake) ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ರಾಜಧಾನಿ ಜಕಾರ್ತದಲ್ಲಿ ಕಟ್ಟಡಗಳು ಅಲುಗಾಡಿವೆ ಎಂದು ವರದಿಯಾಗಿದೆ. ಭೂಕಂಪವು 0905 GMT ಯಲ್ಲಿ ದ್ವೀಪದ ನೈಋತ್ಯಕ್ಕೆ ಮತ್ತು 37 ಕಿಲೋಮೀಟರ್ (23 ಮೈಲಿ) ಆಳದಲ್ಲಿ ಅಪ್ಪಳಿಸಿತು ಎಂದು ಯುಸ್ಜಿಎಸ್ ಹೇಳಿದೆ. ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಮತ್ತು ಸಾವುನೋವುಗಳು ಅಥವಾ ಹಾನಿಗಳ ಬಗ್ಗೆ ಈವರೆಗೆ ವರದಿ ಆಗಿಲ್ಲ ರಾಜಧಾನಿಯಲ್ಲಿ ಕಂಪನವು ಕಂಡುಬಂದಿದ್ದು ಕಟ್ಟಡಗಳಲ್ಲಿ ನಡುಕ ಅನುಭವಕ್ಕೆ ಬಂದಿದೆ ಎಂದು ಎಎಫ್‌ಪಿ ಪತ್ರಕರ್ತರು ವರದಿ ಮಾಡಿದ್ದಾರೆ. ಕೆಲವು ಜಕಾರ್ತ ನಿವಾಸಿಗಳನ್ನು ಕಟ್ಟಡಗಳಿಂದ ಸ್ಥಳಾಂತರಿಸಲಾಯಿತು ಮತ್ತು ಭೂಕಂಪದ ನಂತರ ನೂರಾರು ಜನರು ಹೊರಾಂಗಣದಲ್ಲಿ ಕಾಯುತ್ತಿದ್ದರು ಎಂದು ಅಲ್ಲಿನ ಎಎಫ್ ಪಿ ವರದಿಗಾರು ತಿಳಿಸಿದ್ದಾರೆ.25 ವರ್ಷದ ನಿವಾಸಿ ನೂರ್ ಲತೀಫಾ ರಾಜಧಾನಿಯ ದಕ್ಷಿಣದಲ್ಲಿರುವ ಕಲಿಬಾಟಾ ಸಿಟಿ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಜನರು ಭೂಕಂಪನ ಸಂಭವಿಸುತ್ತಿದ್ದಂತೆ ತಮ್ಮ ಮನೆಗಳಿಂದ ಹೇಗೆ ಓಡಿಹೋದರು ಎಂಬುದನ್ನು ವಿವರಿಸಿದರು. ನಾನು ಮನೆಯಿಂದ ಕೆಲಸ ಮಾಡುತ್ತಿದ್ದೆ ಮತ್ತು ನನ್ನ ಲ್ಯಾಪ್‌ಟಾಪ್ ಚಲಿಸುತ್ತಿರುವುದನ್ನು ಗಮನಿಸಿದೆ.ನಂತರ ಬಾಗಿಲು ದಡಬಡಿಸಲು ಪ್ರಾರಂಭಿಸಿತು ಮತ್ತು ನೇತಾಡುವ ವಸ್ತುಗಳು ಶಬ್ದ ಮಾಡಲು ಪ್ರಾರಂಭಿಸಿದವು ಎಂದು ಲತೀಫಾ ಎಎಫ್‌ಪಿಗೆ ತಿಳಿಸಿದರು.
“ನಾನು ಸ್ನಾನಗೃಹದಲ್ಲಿದ್ದ ನನ್ನ ರೂಮ್‌ಮೇಟ್ ಅನ್ನು ಕರೆದು ನಾವು ಅಪಾರ್ಟ್ಮೆಂಟ್ ನಿಂದ ಓಡಿಹೋದೆವು. ಹೊರಗಿನ ಜನರು ತುರ್ತು ಮೆಟ್ಟಿಲುಗಳ ಕಡೆಗೆ ಧಾವಿಸುತ್ತಿದ್ದರು ಎಂದು ಲತೀಫಾ ಹೇಳಿದ್ದಾರೆ.
ಜಕಾರ್ತಾದಲ್ಲಿ ಕಂಪನ ಹೆಚ್ಚು ಅನುಭವಕ್ಕೆ ಬಂದಿದೆ. “ನಾನು ತುಂಬಾ ಹೆದರಿದೆ, ಇದ್ದಕ್ಕಿದ್ದಂತೆ ಭೂಕಂಪ ಸಂಭವಿಸಿದೆ ಮತ್ತು ಅದು ತುಂಬಾ ಪ್ರಬಲವಾಗಿದೆ” ಎಂದು 38 ವರ್ಷದ ಜಕಾರ್ತಾ ನಿವಾಸಿ ಅನಿ ಹೇಳಿದರು.
“ನನಗೆ ಕಂಪನ ಅನುಭವಕ್ಕೆ ಬಂದಾಗ ನಾನು ನೇರವಾಗಿ ನನ್ನ ಉದ್ಯೋಗದಾತರ ಮಗುವನ್ನು ಹಿಡಿದು ಕೆಳಕ್ಕೆ ಓಡಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಮತ್ತು ಸುಮಾತ್ರಾ ದ್ವೀಪದ ಲ್ಯಾಂಪಂಗ್‌ನಲ್ಲಿಯೂ ಭೂಕಂಪದ ಅನುಭವವಾಗಿದೆ.
ಇಂಡೋನೇಷ್ಯಾ “ಪೆಸಿಫಿಕ್ ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ, ಇದು ಹೆಚ್ಚು ಭೂಕಂಪನ ಸಕ್ರಿಯ ವಲಯವಾಗಿದೆ. ಅಲ್ಲಿ ಭೂಮಿಯ ಹೊರಪದರದ ವಿವಿಧ ಫಲಕಗಳು ಭೇಟಿಯಾಗುತ್ತವೆ ಮತ್ತು ಹೆಚ್ಚಿನ ಸಂಖ್ಯೆಯ ಭೂಕಂಪಗಳು ಮತ್ತು ಜ್ವಾಲಾಮುಖಿಗಳನ್ನು ಸೃಷ್ಟಿಸುತ್ತವೆ.
ಕಳೆದ ತಿಂಗಳು 7.4 ತೀವ್ರತೆಯ ಭೂಕಂಪವು ಪೂರ್ವ ಇಂಡೋನೇಷ್ಯಾವನ್ನು ಅಪ್ಪಳಿಸಿತು. ಇದು ಸುನಾಮಿ ಎಚ್ಚರಿಕೆಯನ್ನು ಉಂಟುಮಾಡುವುದ ಜತೆಗೆ ಸಣ್ಣ ಹಾನಿಯನ್ನು ಉಂಟುಮಾಡಿತು.
ಇದನ್ನೂ ಓದಿ: Uttar Pradesh Elections ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಜತೆ 6 ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
Published On - 5:15 pm, Fri, 14 January 22