
ಅಫ್ಘಾನಿಸ್ತಾನ, ಆಗಸ್ಟ್ 20: ಅಫ್ಘಾನಿಸ್ತಾನ(Afghanistan)ದಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗಾಹುತಿಯಾಗಿದ್ದು, ಘಟನೆಯಲ್ಲಿ 71 ಮಂದಿ ಸುಟ್ಟು ಕರಕಲಾಗಿದ್ದಾರೆ. ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಬಸ್ಸೊಂದು ಟ್ರಕ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು. ನೋಡ ನೋಡುತ್ತಲೇ ಜನರು ಸುಟ್ಟು ಕರಕಲಾಗಿದ್ದಾರೆ. 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸರ್ಕಾರದ ವಕ್ತಾರ ಅಹ್ಮದುಲ್ಲಾ ಮುತ್ತಕಿ ಪೋಸ್ಟ್ ಮಾಡಿದ್ದು, ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ, ಡಿಕ್ಕಿಯ ನಂತರ ಬಸ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅಲ್ಲಿದ್ದ ಜನ ಭಯಭೀತರಾಗಿರುವುದನ್ನು ಕಾಣಬಹುದು.
ಬಸ್ ಇರಾನ್‌ನಿಂದ ಗಡಿಪಾರು ಮಾಡಲಾದ ಆಫ್ಘನ್ನರನ್ನು ಹೊತ್ತೊಯ್ಯುತ್ತಿತ್ತು ಮತ್ತು ಗಡಿ ದಾಟಿದ ನಂತರ ಕಾಬೂಲ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಪ್ರಾಂತೀಯ ಅಧಿಕಾರಿ ಮೊಹಮ್ಮದ್ ಯೂಸುಫ್ ಸಯೀದಿ ಎಎಫ್‌ಪಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ನೆಲಮಂಗಲ: ಲಾರಿ-ಕೆಎಸ್ಆರ್ಟಿಸಿ ಬಸ್ ಮಧ್ಯೆ ಭೀಕರ ಅಪಘಾತ, ಮೂವರು ಸಾವು
ಅಪಘಾತಕ್ಕೆ ಕಾರಣವೇನು?
ಹೆರಾತ್ ಪ್ರಾಂತ್ಯದ ಪೊಲೀಸರು ಈ ಅಪಘಾತಕ್ಕೆ ಬಸ್ಸಿನ ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ. ಇತ್ತೀಚೆಗೆ ಇರಾನ್‌ನಿಂದ ಹಿಂದಿರುಗಿ ರಾಜಧಾನಿ ಕಾಬೂಲ್‌ಗೆ ತೆರಳುತ್ತಿದ್ದ ಅಫ್ಘನ್ನರನ್ನು ಬಸ್ ಹೊತ್ತೊಯ್ಯುತ್ತಿತ್ತು ಎಂದು ಪ್ರಾಂತೀಯ ಅಧಿಕಾರಿ ಮೊಹಮ್ಮದ್ ಯೂಸುಫ್ ಸಯೀದಿ ಎಎಫ್‌ಪಿಗೆ ತಿಳಿಸಿದ್ದಾರೆ. ಈ ಜನರು ಇತ್ತೀಚಿನ ತಿಂಗಳುಗಳಲ್ಲಿ ಇರಾನ್‌ನಿಂದ ಗಡೀಪಾರು ಮಾಡಲ್ಪಟ್ಟ ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟ ಆಫ್ಘನ್ನರ ದೊಡ್ಡ ಗುಂಪಿನ ಭಾಗವಾಗಿದ್ದರು.
ಬಸ್ ವಿಡಿಯೋ
⚡️🇦🇫 At least 71 people including 17 children were killed when a bus carrying deported migrants collided with a truck and motorcycle in Herat province, Afghanistan, before catching fire. pic.twitter.com/vapzIvuqPO
— Lala News & Stuff (@lala515711) August 19, 2025
ಗುಜ್ರಾ ಜಿಲ್ಲೆಯಲ್ಲಿ ಅಪಘಾತ
ಎಲ್ಲಾ ಪ್ರಯಾಣಿಕರು ಪ್ರವಾಸಿ ಇಸ್ಲಾಂ ಕಲಾ ಎಂಬ ಸ್ಥಳದಿಂದ ಬಸ್ ಹತ್ತಿದ್ದರು ಎಂದು ಸಯೀದಿ ಹೇಳಿದರು. ಹೆರಾತ್ ನಗರದ ಹೊರಗಿನ ಗುಜಾರಾ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಟ್ರಕ್‌ನಲ್ಲಿ ಇಬ್ಬರು ಮತ್ತು ಬೈಕ್ನಲ್ಲಿ ಇಬ್ಬರು ಇದ್ದರು.
ಅಫ್ಘಾನಿಸ್ತಾನದಲ್ಲಿ ರಸ್ತೆ ಅಪಘಾತಗಳಿಗೆ ಕಾರಣಗಳು
ಅಫ್ಘಾನಿಸ್ತಾನದಲ್ಲಿ ಸಂಚಾರ ಅಪಘಾತಗಳು ಸಾಮಾನ್ಯ. ದಶಕಗಳ ಸಂಘರ್ಷ, ಕೆಟ್ಟ ರಸ್ತೆಗಳು, ಹೆದ್ದಾರಿಗಳಲ್ಲಿ ಅಪಾಯಕಾರಿ ಚಾಲನೆ ಮತ್ತು ನಿಯಮಗಳನ್ನು ನಿರ್ಲಕ್ಷಿಸುವುದು ಸೇರಿದಂತೆ ರಸ್ತೆ ಅಪಘಾತಗಳಿಗೆ ಹಲವು ಕಾರಣಗಳಿವೆ. ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಬಸ್‌ಗಳು ಹಳೆಯವು ಮತ್ತು ತಾಂತ್ರಿಕವಾಗಿ ಅಸುರಕ್ಷಿತವಾಗಿವೆ ಮತ್ತು ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಮೇ 2016 ರಲ್ಲಿ, ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದ ಜಬುಲ್‌ನಲ್ಲಿರುವ ಕಂದಹಾರ್-ಕಾಬೂಲ್ ಹೆದ್ದಾರಿಯಲ್ಲಿ ಎರಡು ಪ್ರಯಾಣಿಕ ಬಸ್‌ಗಳು ಮತ್ತು ಒಂದು ಟ್ರಕ್ ಡಿಕ್ಕಿ ಹೊಡೆದಿದ್ದವು. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಅಪಘಾತದ ನಂತರ ವಾಹನಗಳು ತಕ್ಷಣವೇ ಬೆಂಕಿಗೆ ಆಹುತಿಯಾದವು. ಮಹಿಳೆಯರು, ಮಕ್ಕಳು ಮತ್ತು ಸಾಮಾನ್ಯ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಬೆಂಕಿಯಿಂದಾಗಿ, ಹೆಚ್ಚಿನ ಜನರು ಹೊರಬರಲು ಸಾಧ್ಯವಾಗದೆ ಜೀವಂತವಾಗಿ ಸುಟ್ಟುಹೋದರು. ಈ ಅಪಘಾತದಲ್ಲಿ ಕನಿಷ್ಠ 73 ಜನರು ಸಾವನ್ನಪ್ಪಿದ್ದರು. ಹಾಗೂ ಹತ್ತಾರು ಮಂದಿ ಗಾಯಗೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ