ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಮುಂದಿನ ವಾರಕ್ಕೆ ಮುಂದೂಡಿಕೆ; ತಾಲಿಬಾನ್ ಮಾಹಿತಿ

Afghanistan Government | ಅಫ್ಘಾನ್​ನಲ್ಲಿ ತಾಲಿಬಾನ್ ಸರ್ಕಾರ ಮುಂದಿನ ವಾರ ರಚನೆಯಾಗಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಮುಂದಿನ ವಾರಕ್ಕೆ ಮುಂದೂಡಿಕೆ; ತಾಲಿಬಾನ್ ಮಾಹಿತಿ
ಮುಲ್ಲಾ ಅಬ್ದುಲ್ ಘನಿ ಬರಾದಾರ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶುಕ್ರವಾರವೇ ನೂತನ ತಾಲಿಬಾನ್ ಸರ್ಕಾರ (Taliban Government) ರಚನೆಯಾಗಬೇಕಿತ್ತು. ಕೊನೆಗೆ ಹೊಸ ಸರ್ಕಾರ ರಚನೆಯ ಕಾರ್ಯಕ್ರಮವನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಎರಡನೇ ಬಾರಿಗೆ ಅಫ್ಘಾನಿಸ್ತಾನದ ಸರ್ಕಾರ ರಚನೆ ಸಮಾರಂಭವನ್ನು ಮುಂದೂಡಲಾಗಿದೆ. ಅಫ್ಘಾನ್​ನಲ್ಲಿ (Afghanistan) ತಾಲಿಬಾನ್ ಸರ್ಕಾರ ಮುಂದಿನ ವಾರ ರಚನೆಯಾಗಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟ ರಚನೆಯ ಬಿಕ್ಕಟ್ಟು ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ನೂತನ ಸರ್ಕಾರ ರಚನೆ ಕಾರ್ಯಕ್ರಮವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ತಾಲಿಬಾನ್ ಸರ್ಕಾರದ ಅಧ್ಯಕ್ಷರಾಗಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಇದು ಎರಡನೇ ಬಾರಿಗೆ ತಾಲಿಬಾನ್ ಸರ್ಕಾರ ರಚನೆ ಕಾರ್ಯಕ್ರಮವನ್ನು ಮುಂದೂಡಿದೆ. ಈ ಮೊದಲು ಅಫ್ಘಾನಿಸ್ತಾನದ ಅಧ್ಯಕ್ಷರ ಸ್ಥಾನಕ್ಕೆ ತಾಲಿಬಾನ್​ನ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದವು. ಆದರೆ, ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಕುರಿತು ತಾಲಿಬಾನ್ ಅಸ್ತಿತ್ವಕ್ಕೆ ತಂದಿರುವ ಸಮಿತಿಯ ಸದಸ್ಯ ಖಲೀಲ್ ಹಕ್ಕಾನಿ ಉಳಿದ ಗುಂಪುಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ವಾರಕ್ಕೆ ಸರ್ಕಾರ ರಚನೆ ಕಾರ್ಯಕ್ರಮವನ್ನು ಮುಂದೂಡಲು ಕಾರಣವೇನೆಂಬ ಬಗ್ಗೆ ತಾಲಿಬಾನ್ ನಾಯಕರು ಯಾವುದೇ ನಿಖರ ಕಾರಣ ನೀಡಿಲ್ಲ.

ತಾಲಿಬಾನ್ ಬೇರೆ ಯಾವ ಸಂಘಟನೆ ಅಥವಾ ನಾಯಕರ ಸಹಾಯವಿಲ್ಲದೆ ಸರ್ಕಾರ ರಚಿಸುವ ಸಾಮರ್ಥ್ಯ ಹೊಂದಿದೆ. ಆದರೆ, ತಾಲಿಬಾನ್ ಎಲ್ಲ ಪಕ್ಷಗಳು, ಗುಂಪುಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿ ಆಡಳಿತ ನಡೆಸಲು ನಿರ್ಧರಿಸಿದೆ. ತಾಲಿಬಾನ್ ಏಕಾಂಗಿಯಾಗಿ ಸರ್ಕಾರ ರಚಿಸಿದರೆ ಈ ಜಗತ್ತು ಅದನ್ನು ಒಪ್ಪಿಕೊಳ್ಳದಿರಬಹುದು ಎಂದು ಖಲೀಲ್ ಹಕ್ಕಾನಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡು ಸುಮಾರು 2 ವಾರಗಳಾಗಿವೆ. ಇದಾದ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಮುಂದಿನ ವಾರ ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೊಸ ಸರ್ಕಾರದ ನೇತೃತ್ವವನ್ನು ವಹಿಸುವುದು ಬಹುತೇಕ ಖಚಿತವಾಗಿದೆ.

ಅಫ್ಘಾನಿಸ್ತಾನದ ಇಸ್ಲಾಮಿಸ್ಟ್​ ಗ್ರೂಪ್​ ನೀಡಿರುವ ಮಾಹಿತಿ ಪ್ರಕಾರ, ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೊಸ ಸರ್ಕಾರದ ನಾಯಕನಾಗಲಿದ್ದಾರೆ. ತಾಲಿಬಾನ್ ರಾಜಕೀಯ ಕಚೇರಿಯ ನೇತೃತ್ವ ವಹಿಸಿಕೊಳ್ಳಲಿರುವ ಮುಲ್ಲಾ ಬರಾದಾರ್ ನೇತೃತ್ವದಲ್ಲಿ ಇರಾನ್ ಮಾದರಿಯ ಸರ್ಕಾರ ರಚನೆಯಾಗಲಿದೆ. ಉಳಿದಂತೆ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಅವರ ಮಗ ಮುಲ್ಲಾ ಮೊಹಮ್ಮದ್ ಯಾಕೂಬ್, ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್​ಜೈ ಅಫ್ಘಾನಿಸ್ತಾನದ ನೂತನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ. ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಶೇಖ್ ಹೈಬತುಲ್ಲಾ ಅಖುಂಡಜಾದ, ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗುವುದು. ಈ ಮೊದಲು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಮುಲ್ಲಾ ಬರಾದಾರ್ ಹೆಸರು ಕೇಳಿಬಂದಿದೆ. ಅಫ್ಘಾನ್ ಸರ್ಕಾರ ಈಗಾಗಲೇ ವಿವಿಧ ರಾಜ್ಯಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಿದೆ.

ಇದನ್ನೂ ಓದಿ: Afghanistan Government: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ತಾಲಿಬಾನ್ ಸಹ- ಸಂಸ್ಥಾಪಕ ಮುಲ್ಲಾ ಬರಾದಾರ್

ಅಫ್ಘಾನಿಸ್ತಾನ ತ್ಯಜಿಸಲು ಸಹಾಯವಾಗುತ್ತದೆಂಬ ಕಾರಣಕ್ಕೆ ಶಿಬಿರದಲ್ಲಿದ್ದ ಯುವತಿಯರು ಅನಿವಾರ್ಯವಾಗಿ ಮದುವೆಯಾಗಬೇಕಾಯಿತು!

(Afghanistan Crisis Taliban postponed the announcement of New Afghan government formation to Next Week)

Click on your DTH Provider to Add TV9 Kannada