ತಾಲಿಬಾನ್​ಗೆ ಸದ್ಯಕ್ಕೆ ಮಾನ್ಯತೆ ಇಲ್ಲ, ಭರವಸೆ ಈಡೇರಿಸಿದ ಮೇಲೆ ನೋಡೋಣ ಎಂದ ರಷ್ಯಾ

ತಾಲಿಬಾನ್​ನ ಮುಂದಿನ ನಡೆಗಳನ್ನು ಎಚ್ಚರಿಕೆಯಿಂದ ಗಮನಿಸಿಯೇ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗಿ ಲವ್​ರೊವ್ ಹೇಳಿದ್ದಾರೆ.

ತಾಲಿಬಾನ್​ಗೆ ಸದ್ಯಕ್ಕೆ ಮಾನ್ಯತೆ ಇಲ್ಲ, ಭರವಸೆ ಈಡೇರಿಸಿದ ಮೇಲೆ ನೋಡೋಣ ಎಂದ ರಷ್ಯಾ
ತಾಲಿಬಾನ್

ಮಾಸ್ಕೊ: ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾ ದೇಶವು ತಾಲಿಬಾನ್​ಗೆ ಅಧಿಕೃತ ಮಾನ್ಯತೆ ನೀಡುವ ನಿರ್ಧಾರವನ್ನು ಮುಂದೂಡುವುದಾಗಿ ಸ್ಪಷ್ಟಪಡಿಸಿದೆ. ಅಧಿಕಾರಕ್ಕೆ ಬಂದ ಆರಂಭದಲ್ಲಿ ತಾಲಿಬಾನ್ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು. ತಾಲಿಬಾನ್​ನ ಮುಂದಿನ ನಡೆಗಳನ್ನು ಎಚ್ಚರಿಕೆಯಿಂದ ಗಮನಿಸಿಯೇ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗಿ ಲವ್​ರೊವ್ ಹೇಳಿದ್ದಾರೆ.

ಮಾಸ್ಕೊದಲ್ಲಿ ಬುಧವಾರ ತಾಲಿಬಾನ್ ನಿಯೋಗದ ಜೊತೆಗೆ ರಷ್ಯಾ ನಡೆಸಲಿರುವ ಮಾತುಕತೆಯನ್ನು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ. ಇದಕ್ಕೂ ಮೊದಲು ರಷ್ಯಾ ವಿದೇಶಾಂಗ ಸಚಿವರು ಮಾನ್ಯತೆಯ ವಿಚಾರ ಪ್ರಸ್ತಾಪಿಸಿರುವುದಕ್ಕೆ ಹಲವು ಹೊಸ ಅರ್ಥಗಳು ಬಂದಿವೆ. ವಿವಿಧ ರಾಜಕೀಯ ಗುಂಪುಗಳು ಮತ್ತು ಸ್ಥಳೀಯ ಬುಡಕಟ್ಟು ಗುಂಪುಗಳಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಭರವಸೆ ಈಡೇರಿಸಿಕೊಳ್ಳಬೇಕು ಎಂದು ರಷ್ಯಾ ಸರ್ಕಾರವು ತಾಲಿಬಾನ್​ಗೆ ತಾಕೀತು ಮಾಡಿದೆ.

ರಷ್ಯಾ ಆಯೋಜಿಸಿರುವ ಅಫ್ಘಾನಿಸ್ತಾನ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕ ಈಗಾಗಲೇ ಸ್ಪಷ್ಟಪಡಿಸಿದೆ. ಚೀನಾ ಮತ್ತು ಪಾಕಿಸ್ತಾನ ಈ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅಮೆರಿಕ ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದೆ. ‘ಅಫ್ಘಾನಿಸ್ತಾನದ ಆಡಳಿತದೊಂದಿಗೆ ಮಾತುಕತೆ ನಡೆಸಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಆದರೆ ಕೆಲ ಸಮಸ್ಯೆಗಳಿಂದಾಗಿ ನಾವು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ನೆಡ್ ಪ್ರೈಸ್ ವರದಿಗಾರರಿಗೆ ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ 20 ವರ್ಷಗಳಿಂದ ಸೇನೆಯನ್ನು ನಿಯೋಜಿಸಿದ್ದ ಅಮೆರಿಕ ಅಲ್ಲಿಂದ ಕಾಲ್ತೆಗೆಯುವ ಮೊದಲೇ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತ್ತು. ಚೀನಾ, ರಷ್ಯಾ ಮತ್ತು ಪಾಕಿಸ್ತಾನಗಳು ಅಫ್ಘಾನಿಸ್ತಾನದ ಆಡಳಿತದ ಮೇಲೆ ಪರೋಕ್ಷವಾಗಿ ಹಿಡಿತ ಸಾಧಿಸಲು ಹವಣಿಸುತ್ತಿವೆ. ತಾಲಿಬಾನ್ ಆಡಳಿತಕ್ಕೆ ಯಾವುದೇ ದೇಶ ಮಾನ್ಯತೆ ನೀಡಬಾರದು ಎಂದು ಲಾಬಿ ಮಾಡುತ್ತಿರುವ ಅಮೆರಿಕ ಪ್ರತಿ ನಡೆಯನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನವು ತೀವ್ರವಾದಿಗಳು, ಭಯೋತ್ಪಾದಕರ ನೆಲೆವೀಡಾಗದಿರಲಿ: ಜಿ20 ಸಮಾವೇಶದಲ್ಲಿ ನರೇಂದ್ರ ಮೋದಿ
ಇದನ್ನೂ ಓದಿ: ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ ಗಾಯ

Click on your DTH Provider to Add TV9 Kannada