Year Ender 2021: ಅಫ್ಘಾನ್ ಪಾಲಿಗೆ 2021 ಕರಾಳ; ಆ ದೇಶದಲ್ಲಿ ಈ ವರ್ಷ ಏನೆನೆಲ್ಲ ಆಯಿತು? ಇತಿಹಾಸ ಮರುಕಳಿಸಿದ್ದು ಹೇಗೆ?
ಇಡೀ ಅಫ್ಘಾನಿಸ್ತಾನವನ್ನು ಗೆದ್ದಿದ್ದೇವೆಂದು ಬೀಗಿದ ತಾಲಿಬಾನಿಗಳಿಗೆ ಸೆಪ್ಟೆಂಬರ್ ಕೊನೇವರೆಗೂ ಇನ್ನಿಲ್ಲದಂತೆ ಕಾಡಿದ್ದು ಪಂಜಶಿರ್ ಪ್ರಾಂತ್ಯ. ಅಲ್ಲಿನ ಪ್ರತಿರೋಧ ಪಡೆಗಳು ಅದೆಷ್ಟೋ ತಾಲಿಬಾನಿಗಳನ್ನು ಹತ್ಯೆ ಮಾಡಿದವು. ತಮ್ಮದೇ ಪ್ರತ್ಯೇಕ ಸರ್ಕಾರ ರಚನೆಗೂ ಮುಂದಾದವು.
ಅಫ್ಘಾನಿಸ್ತಾನ..ಇದೊಂದು ಇಸ್ಲಾಮಿಕ್ ರಾಷ್ಟ್ರ, ಬಡ ರಾಷ್ಟ್ರ.. ಬುಡಕಟ್ಟು ಜನಾಂಗ, ಅಲೆಮಾರಿಗಳೇ ಇರುವ, ಮರಳುಗಾಡಿನ ದೇಶ. 2021ನೇ ಇಸ್ವಿ ಈ ದೇಶದ ಪಾಲಿಗೆ ಬಹುದೊಡ್ಡ ತಿರುವುಕೊಟ್ಟಿದೆ. 2021ರ ಪ್ರಾರಂಭದಿಂದಲೇ ಅಲ್ಲಿ ಶುರುವಾದ ಅವ್ಯವಸ್ಥೆಗಳು, ಆಗಸ್ಟ್ ಹೊತ್ತಿಗೆ ಒಂದು ಘಟ್ಟ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನವೆಂಬುದು ಮತ್ತೊಮ್ಮೆ ತಾಲಿಬಾನ್ ಉಗ್ರರ ಕೈವಶವಾಗಿದೆ. ಈಗಲ್ಲಿ ತಾಲಿಬಾನಿಗಳು ಆಳುತ್ತಿದ್ದರೆ. ಅವರದ್ದೇ ಸರ್ಕಾರ, ಅವರದ್ದೇ ಆಡಳಿತ, ಅವರು ಮಾಡಿದ್ದೇ ಕಾನೂನು..ಅವರೇನು ಹೇಳುತ್ತಾರೋ ಅದೇ ಅಂತಿಮ !
ತಾಲಿಬಾನಿಗಳು ಅಫ್ಘಾನಿಸ್ತಾನ ಆಳುತ್ತಿರುವುದು ಇದೇ ಮೊದಲಲ್ಲ. 1994ರಲ್ಲಿ ತಾಲಿಬಾನ್ ಚಟುವಟಿಕೆ ಅಫ್ಘಾನ್ನಲ್ಲಿ ತೀವ್ರಗೊಂಡಿತ್ತು. ಪಾಕಿಸ್ತಾನ ಕೂಡ ಬೆಂಬಲ ನೀಡಿತ್ತು. ಇದೇ ವರ್ಷ ಅಫ್ಘಾನಿಸ್ತಾನದ ದಕ್ಷಿಣ ಮತ್ತು ಮಧ್ಯ ಭಾಗದ ಹಲವು ಪ್ರಾಂತ್ಯಗಳಲ್ಲಿ ತಾಲಿಬಾನ್ ಪ್ರಾಬಲ್ಯ ಮೆರೆಯಿತು. 1995ರಲ್ಲಿ ತಾಲಿಬಾನಿಗಳು ಕಾಬೂಲ್ ಮೇಲೆ ದಾಳಿ ಮುಂದುವರಿಸಿದರಾದರೂ ಆಗಿದ್ದ ಮಿಲಿಟರಿ ಕಮಾಂಡರ್ ಅಹ್ಮದ್ ಶಾ ಮಸೂದ್ ಪಡೆಯನ್ನು ಸೋಲಿಸಲಾಗದೆ ಹಿಮ್ಮೆಟ್ಟಿದ್ದರು. ಆದರೆ 1996ರಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಬೆಂಬಲದೊಂದಿಗೆ ಹೊಸದಾಗಿ ದಾಳಿ ಮಾಡಿದರು. ಕೊನೆಗೂ ಸೆಪ್ಟೆಂಬರ್ 27ರಂದು ಕಾಬೂಲ್ನ್ನು ವಶಪಡಿಸಿಕೊಂಡರು.
ತಮ್ಮ ಆಡಳಿತ ಬಂದಿದದೇ ತಡ, ಆ ದೇಶವನ್ನು ಇಸ್ಲಾಮಿಕ್ ಎಮಿರೇಟ್ಸ್ ಅಫ್ಘಾನಿಸ್ತಾನವನ್ನಾಗಿ ಮಾಡಿದರು. ಇಡೀ ದೇಶದ ರಾಜಕೀಯ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದರು. ಇಸ್ಲಾಂ ಕಾನೂನು ಹೇರಿದರು. ಎಲ್ಲ ಕಡೆಯೂ ತಾವು ನಂಬಿದ ಇಸ್ಲಾಂ ನಿಯಮಗಳನ್ನೇ ಜಾರಿಗೊಳಿಸಿದರು. ಮಹಿಳೆಯರು ಮನೆಯಿಂದ ಹೊರಗೆ ಹೋಗುವುದನ್ನು, ಶಾಲೆಗೆ ಹೋಗುವುದನ್ನು, ಪುರುಷ ಸಂಬಂಧಿಗಳು ಜತೆಗಿಲ್ಲದೆ ಒಬ್ಬರೇ ಮನೆಯಿಂದ ಹೊರಹೋಗುವುದನ್ನು ನಿರ್ಬಂಧಿಸಿದರು. ಒಟ್ಟಾರೆ ಕಠಿಣ ಶರಿಯಾ ಕಾನೂನಿನಿಂದ ಮಹಿಳೆಯರಿಗೆ ಹಲವು ಕಟ್ಟುಪಾಡು ವಿಧಿಸಿದರು. ಅಂತೆಯೇ ಈ ಬಾರಿಯೂ ಕೂಡ ಇದನ್ನೆಲ್ಲ ಮಾಡಿದ್ದಾರೆ. 2001ರವರೆಗೂ ಇಡೀ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳದ್ದೇ ಕಾರುಬಾರು ಆಗಿದ್ದು ಈಗ ಇತಿಹಾಸ.
ಮರುಕಳಿಸಿದ ಇತಿಹಾಸ ಅದೇ ಇತಿಹಾಸ 2021ರ ಆಗಸ್ಟ್ನಲ್ಲಿ ಮರುಕಳಿಸಿತು. ಈ ಹಿಂದೆ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗುತ್ತಿದ್ದಂತೆ, ಮತ್ತೆ ಸಕ್ರಿಯವಾಗಿದ್ದ ಒಸಮಾ ಬಿನ್ ಲಾಡೆನ್ ನೇತೃತ್ವದ ಅಲ್-ಖೈದಾ ಉಗ್ರ ಸಂಘಟನೆ 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ (ಡಬ್ಲ್ಯೂಟಿಸಿ) ಮತ್ತು ಪೆಂಟೆಗನ್ ಮೇಲೆ ದಾಳಿ ನಡೆಸಿದರು. ಇದು ಅತ್ಯಂತ ಭೀಕರ ಉಗ್ರದಾಳಿಯಾಗಿದ್ದು, 3 ಸಾವಿರ ಮಂದಿ ಮೃತಪಟ್ಟಿದ್ದಾರೆ. ಹಾಗೇ 25ಸಾವಿರಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದೊಂದು ದಾಳಿ ಅಫ್ಘಾನಿಸ್ತಾನದಿಂದ ತಾಲಿಬಾನಿಗಳು ಓಡುವಂತೆ ಮಾಡಿತು. ಕಾರಣ ಅಲ್-ಖೈದಾ ಮತ್ತು ತಾಲಿಬಾನ್ ಪರಸ್ಪರ ಸ್ನೇಹದಿಂದ ಇದ್ದ ಉಗ್ರಸಂಘಟನೆಗಳಾಗಿದ್ದವು. ಅಮೆರಿಕದ ಮೇಲೆ ದಾಳಿ ನಡೆದಿದ್ದೇ ತಡ, ಅಂದಿನ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ ತಾಲಿಬಾನಿಗಳ ವಿರುದ್ಧ ಸಮರ ಸಾರಿದರು. ಬ್ರಿಟಿಷ್ ಸರ್ಕಾರದ ಸಹಕಾರದೊಂದಿಗೆ ತಾಲಿಬಾನಿಗಳು-ಅಲ್ಖೈದಾ ಉಗ್ರರ ಮೇಲೆ ಯುಎಸ್ ಸೇನೆ ವೈಮಾನಿಕ ದಾಳಿ ನಡೆಸಿತು. ಬಾಂಬ್ ದಾಳಿ, ಕಂಡಲ್ಲಿ ಗುಂಡುಹೊಡೆಯುವ ಕ್ರಮಗಳನ್ನು ಅನುಸರಿಸಿತು. ಕ್ರಮೇಣ, ಜರ್ಮನಿ, ಕೆನಡಾ, ಆಸ್ಟ್ರೇಲಿಯಾದ ಬೆಂಬಲವೂ ದೊರೆತು, ಅಫ್ಘಾನ್ನಿಂದ ತಾಲಿಬಾನಿಗಳು ಕಾಲ್ಕಿತ್ತಿದ್ದರು.
ಸೇನೆ ವಾಪಸ್ ಪಡೆದ ಜೋ ಬೈಡನ್ ಅಂದು ಕಾಲ್ಕಿತ್ತಿದ್ದ ಅಫ್ಘಾನಿಸ್ತಾನ ಮತ್ತೆ ಇಲ್ಲಿಗೆ ಕಾಲಿಡಲು ಕಾರಣವಾಗಿದ್ದು, ಯುಎಸ್ ಸರ್ಕಾರ ತನ್ನ ಸೇನೆಯನ್ನು ಹಿಂಪಡೆಯಲು ನಿರ್ಧಾರ ಮಾಡಿದ್ದು. 2020ರ ಫೆಬ್ರವರಿಯಲ್ಲಿ. ಅಮೆರಿಕದ ಅಂದಿನ ಅಧ್ಯಕ್ಷ ಟ್ರಂಪ್ ಆಡಳಿತ ಮತ್ತು ತಾಲಿಬಾನ್ ಮುಖಂಡರು ದೋಹಾ ಒಪ್ಪಂದಕ್ಕೆ ಸಹಿ ಹಾಕಿದರು. ಅಫ್ಘಾನ್ನಲ್ಲಿ 2001ರಿಂದಲೂ ಸೇನೆಗಳು ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿರುವ ಕದನಕ್ಕೆ ವಿರಾಮ ಹಾಕಿ, ಶಾಂತಿ ತರುವ ಒಪ್ಪಂದ ಇದಾಗಿತ್ತು. ಅದರ ಅನ್ವಯ ಅಮೆರಿಕ ತನ್ನ ಸೇನೆಯ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ಒಪ್ಪಿಕೊಂಡಿತ್ತು. ನಂತರ 2021ರಲ್ಲಿ ಅಧಿಕಾರಕ್ಕೆ ಏರಿದ ಜೋ ಬೈಡನ್, ತಾವು ಅಮೆರಿಕ ಸೈನಿಕರನ್ನು ಸೆಪ್ಟೆಂಬರ್ ಒಳಗೆ ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಅಮೆರಿಕ ಮತ್ತು ಜರ್ಮನಿ, ಇಟಲಿ ಸೇರಿ ಕೆಲವು ದೇಶಗಳ ಸೈನಿಕರ ಸಂಖ್ಯೆ ಅಫ್ಘಾನ್ನಲ್ಲಿ ಕಡಿಮೆಯಾಗುತ್ತಿದ್ದಂತೆ, ಅಂದರೆ 2021ರ ಜುಲೈ ಹೊತ್ತಿಗೆ ಮತ್ತೆ ತಾಲಿಬಾನಿಗಳ ಉಪಟಳ ಹೆಚ್ಚಾಯಿತು. ಅಫ್ಘಾನ್ ಮೂಲ ಸೈನ್ಯ ಮತ್ತು ತಾಲಿಬಾನ್ ಉಗ್ರರ ನಡುವೆ ಬಡಿದಾಟ ಶುರುವಾಯಿತು.
ಜುಲೈನಲ್ಲಿ 139 ಜಿಲ್ಲೆಗಳ ವಶ ಯುಎಸ್ ಸೇರಿ ಬಹುತೇಕ ಎಲ್ಲ ದೇಶಗಳ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತ ಬಂದರು. 2021ರ ಜುಲೈ 2ರ ಹೊತ್ತಿಗೆ ಸುಮಾರು 139 ಜಿಲ್ಲೆಗಳು ತಾಲಿಬಾನಿಗಳ ವಶದಲ್ಲಿದ್ದವು. ಪ್ರತಿದಿನ ಒಂದಲ್ಲ ಒಂದು ಕಡೆ ಬಾಂಬ್ ದಾಳಿ, ಹತ್ಯೆಗಳು ನಡೆಯುತ್ತಲೇ ಇದ್ದವು. ಕೊನೆಗೆ ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ನ್ನು ವಶಪಡಿಸಿಕೊಳ್ಳುವ ಮೂಲಕ ತಾಲಿಬಾನ್ ಇಡೀ ಅಫ್ಘಾನ್ ಆಡಳಿತ ಶುರು ಮಾಡಿತು. ಅಷ್ಟಾದ ಮೇಲೆ ಆಗಸ್ಟ್ 30ರೊಳಗೆ ಯುಎಸ್ ತನ್ನ ಸಂಪೂರ್ಣ ಸೈನಿಕರನ್ನು ಕರೆಸಿಕೊಳ್ಳಬೇಕು ಎಂಬ ತಾಕೀತು ಬೇರೆ ಮಾಡಿತು. ಅದರಂತೆ 2021ರ ಆಗಸ್ಟ್ 31ರ ಹೊತ್ತಿಗೆ ಯುಎಸ್ನ ಎಲ್ಲ ಯೋಧರೂ ಅಲ್ಲಿಂದ ವಾಪಸ್ ಮರಳಿದ್ದಾರೆ. ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಕೂಡ ದೇಶ ತೊರೆದು ಹೋಗಿದ್ದಾರೆ.
ನಿರಂತರ ಬಾಂಬ್ ದಾಳಿ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಕೂಡ ಅಲ್ಲಿ ರಕ್ತಸಿಕ್ತ ಅಧ್ಯಾಯ ಮುಕ್ತಾಯವಾಗಲಿಲ್ಲ. ಆಗಸ್ಟ್ 26ರಂದು ಕಾಬೂಲ್ ಏರ್ಪೋರ್ಟ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಭೀಕರವಾಗಿದೆ. ಇದರಲ್ಲಿ ಅಮೆರಿಕದ 13 ಯೋಧರು ಸೇರಿ, 180 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಕಾಬೂಲ್ನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ಸಾಮಾನ್ಯ ಜನರ ಗೋಳಂತೂ ಹೇಳತೀರದ್ದು. ನೆರೆ ರಾಷ್ಟ್ರಗಳೂ ಕೂಡ ತಮ್ಮವರನ್ನು ಅಲ್ಲಿಂದ ಕರೆಸಿಕೊಳ್ಳುವ ಧಾವಂತಕ್ಕೆ ಬಿದ್ದವು. ಅಲ್ಲಿನವರಿಗಂತೂ ಅಫ್ಘಾನ್ ಬಿಟ್ಟು ಹೊರಟರೆ ಸಾಕೆಂಬ ಮನೋಭಾವ. ಕಾಬೂಲ್ ಏರ್ಪೋರ್ಟ್ನಲ್ಲಿ ಕಾಲ್ತುಳಿತ, ತಾಲಿಬಾನಿಗಳ ಗುಂಡಿನ ಶಬ್ದ, ಅದೆಷ್ಟೋ ಮುಗ್ಧ ಜನರ ಜೀವ ಬಲಿ. ಒಟ್ಟಾರೆ 2021ರ ಜುಲೈನಿಂದ ಶುರುವಾದ ಹೋರಾಟ, ಹೊಡೆದಾಟ 2021ರ ಅಕ್ಟೋಬರ್ವರೆಗೂ ಮುಂದುವರಿದೆ.
ಈಗ ಅಲ್ಲಿ ಸ್ವಲ್ಪ ಶಾಂತವಾಗಿದ್ದರೂ, ಮತ್ತೆ ಮೊದಲಿನ ಇಸ್ಲಾಂ ಕಟ್ಟುನಿಟ್ಟಿನ ಕಾನೂನು ಹೇರಲಾಗಿದೆ. ತಾಲಿಬಾನಿಗಳು ತಮ್ಮದೇ ಆದ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ. ಜೋ ಬೈಡನ್ ಯಾವುದಕ್ಕೂ ಸ್ಪಂದಿಸಲಿಲ್ಲ. ಎರಡು ದಶಕಗಳ ಕಾಲ ನಮ್ಮ ಸೈನ್ಯವನ್ನು ಅಲ್ಲಿಟ್ಟಿದ್ದೇವೆ. ಸುಧಾರಿತ ಮಿಲಿಟರಿ ಸಾಧನಗಳು, ಅಫ್ಘಾನ್ಸೈನಿಕರಿಗೆ ತರಬೇತಿ ಎಂದು ಹೇಳಿ ವಿಪರೀತ ಖರ್ಚು ಮಾಡಿದ್ದೇವೆ. ಇನ್ನು ಮುಂದೆ ಅಫ್ಘಾನಿಸ್ತಾನದ ಸೈನಿಕರೇ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿಬಿಟ್ಟಿದ್ದರು. ಉಳಿದ ಯಾವುದೇ ರಾಷ್ಟ್ರಗಳೂ ಏನೂ ಮಾತನಾಡಲಿಲ್ಲ. ಈ ಮಧ್ಯೆ ಅಫ್ಘಾನ್ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಖುಷಿಪಟ್ಟಿದ್ದು ಪಾಕಿಸ್ತಾನ, ಚೀನಾ ದೇಶಗಳು.
ಕಾಡಿದ ಪಂಜಶೀರ್ ಹೋರಾಟಗಾರರು ಇಡೀ ಅಫ್ಘಾನಿಸ್ತಾನವನ್ನು ಗೆದ್ದಿದ್ದೇವೆಂದು ಬೀಗಿದ ತಾಲಿಬಾನಿಗಳಿಗೆ ಸೆಪ್ಟೆಂಬರ್ ಕೊನೇವರೆಗೂ ಇನ್ನಿಲ್ಲದಂತೆ ಕಾಡಿದ್ದು ಪಂಜಶಿರ್ ಪ್ರಾಂತ್ಯ. ಅಲ್ಲಿನ ಪ್ರತಿರೋಧ ಪಡೆಗಳು ಅದೆಷ್ಟೋ ತಾಲಿಬಾನಿಗಳನ್ನು ಹತ್ಯೆ ಮಾಡಿದವು. ತಮ್ಮದೇ ಪ್ರತ್ಯೇಕ ಸರ್ಕಾರ ರಚನೆಗೂ ಮುಂದಾದವು. ಆದರೆ ಸೆಪ್ಟೆಂಬರ್ 6ರಂದು ನ್ಯಾಷನಲ್ ರೆಸಿಸ್ಟೆನ್ಸ್ ಪಡೆಯ ವಕ್ತಾರ ಫಾಹಿಮ್ ದಷ್ಟಿಯನ್ನು ತಾಲಿಬಾನಿಗಳು ಕೊಂದರು. ನಂತರ ತಮ್ಮದೇ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ. ಮೊಹಮ್ಮದ್ ಹಸನ್ ಅಖುಂದ್ ತಾಲಿಬಾನ್ನ ಸರ್ಕಾರದ ಮುಖ್ಯಸ್ಥ ಎಂದು ಸೆಪ್ಟೆಂಬರ್ 8ರಂದು ಘೋಷಣೆ ಮಾಡಲಾಗಿದೆ. ಅದರೊಂದಿಗೆ 10 ಮಂದಿ ಸಚಿವರ ಪಟ್ಟಿಯನ್ನೂ ತಾಲಿಬಾನ್ ಬಿಡುಗಡೆ ಮಾಡಿತು. ಅಂದಿನಿಂದಲೂ ಒಂದೊಂದೇ ಕಾನೂನುಗಳನ್ನು ಹೇರುತ್ತ ಬಂದಿದೆ. ಹುಡುಗಿಯರು ಶಾಲೆ-ಕಾಲೇಜಿಗೆ ಹೋಗುವಂತಿಲ್ಲ, ದೂರದ ಪ್ರಯಾಣಗಳಿಗೆ ಪುರುಷ ಸಂಬಂಧಿಯ ಜತೆಯೇ ಹೋಗಬೇಕು, ಮಹಿಳೆಯರ ಧಾರಾವಾಹಿ, ನಾಟಕಗಳನ್ನು ಟಿವಿ ಚಾನಲ್ಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂಬಿತ್ಯಾದಿ ಕಾನೂನುಗಳು ಹೊರಬಿದ್ದಿವೆ. ಒಟ್ಟಾರೆ 2001ರಲ್ಲಿ ಮಗುಚಿ ಮರೆಯಾಗಿದ್ದ ಇತಿಹಾಸವೊಂದು ಈ 2021ರಲ್ಲಿ ಎದ್ದುನಿಂತಿದೆ.
ಇದನ್ನೂ ಓದಿ: Year Ender 2021: Google ನಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಕಾರು ಯಾವುದು ಗೊತ್ತಾ?
Published On - 7:46 am, Wed, 29 December 21