ಭ್ರಷ್ಟಾಚಾರ ಪ್ರಕರಣ; ಶೇಖ್ ಹಸೀನಾ, ಮಗಳ ವಿರುದ್ಧ ಬಾಂಗ್ಲಾದೇಶ ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿ
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ನ್ಯಾಯಾಲಯವು ಬಾಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಪುತ್ರಿಯ ವಿರುದ್ಧ ಹೊಸ ಬಂಧನ ವಾರಂಟ್ ಹೊರಡಿಸಿದೆ. ಶೇಖ್ ಹಸೀನಾ ಮತ್ತು ಅವರ ಮಗಳು ಮಾತ್ರವಲ್ಲದೆ ಒಟ್ಟು 18 ಜನರ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಢಾಕಾ, ಏಪ್ರಿಲ್ 10: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಬಾಗ್ಲಾದ ಉಚ್ಛಾಟಿತ ಪ್ರಧಾನಿ ಶೇಖ್ ಹಸೀನಾ, ಅವರ ಮಗಳು, ಅವರ ಸರಕಾರದಲ್ಲಿದ್ದ ರಾಜಕೀಯ ಸಹೋದ್ಯೋಗಿಗಳು ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ 2 ಒಂದೇ ರೀತಿಯ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. ವಸತಿ ನಿವೇಶನವನ್ನು ಅಕ್ರಮವಾಗಿ ಖರೀದಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನ್ಯಾಯಾಲಯವು ಇಂದು ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina), ಅವರ ಪುತ್ರಿ ಸೈಮಾ ವಾಜೆದ್ ಪುಟುಲ್ ಮತ್ತು ಇತರ 17 ಜನರ ವಿರುದ್ಧ ಹೊಸ ಬಂಧನ ವಾರಂಟ್ ಹೊರಡಿಸಿದೆ. ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಹೊಸ ಬಂಧನ ವಾರಂಟ್‌ಗಳನ್ನು ಹೊರಡಿಸಲಾಯಿತು. ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ಆಯೋಗ (ACC) ಸಲ್ಲಿಸಿದ ಆರೋಪ ಪಟ್ಟಿಯನ್ನು ಇಂದು ಸ್ವೀಕರಿಸಿತು.
ಢಾಕಾ ಮೆಟ್ರೋಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಜಾಕಿರ್ ಹುಸೇನ್ ಗಾಲಿಬ್ ಅವರು ACCಯ ಆರೋಪ ಪಟ್ಟಿಯನ್ನು ಸ್ವೀಕರಿಸಿದರು ಮತ್ತು ತಲೆಮರೆಸಿಕೊಂಡಿರುವ ವ್ಯಕ್ತಿಗಳನ್ನು ಬಂಧಿಸಲು ಆದೇಶಿಸಿದರು. ಈ ಪ್ರಕರಣವು ಢಾಕಾದ ಹೊರವಲಯದಲ್ಲಿರುವ ಪುರ್ಬಾಚಲ್ ನ್ಯೂ ಸಿಟಿ ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ವಸತಿ ನಿವೇಶನವನ್ನು ಪಡೆಯಲು ಶೇಖ್ ಹಸೀನಾ ಮತ್ತು ಅವರ ಮಗಳು ಮೋಸದ ವಿಧಾನಗಳನ್ನು ಬಳಸಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ: ವೀಸಾ ವಿಸ್ತರಣೆ ಬೆನ್ನಲ್ಲೇ ಶೇಖ್ ಹಸೀನಾ ಪಾಸ್‌ಪೋರ್ಟ್ ರದ್ದುಗೊಳಿಸಲು ಭಾರತಕ್ಕೆ ಬಾಂಗ್ಲಾದೇಶ ಒತ್ತಾಯ
ಚಾರ್ಜ್‌ಶೀಟ್‌ನ ಪ್ರಕಾರ, ಪುಟುಲ್ ತನ್ನ ತಾಯಿ, ಆಗಿನ ಪ್ರಧಾನಿ ಹಸೀನಾ ಅವರ ಮೇಲೆ ಅನಗತ್ಯ ಪ್ರಭಾವ ಬೀರಿ ಸರ್ಕಾರಿ ಸ್ವಾಮ್ಯದ ರಾಜಧಾನಿ ಉನ್ಯಾನ್ ಕಾರ್ತ್ರಿಪಕ್ಖಾ (ರಾಜೂಕ್) ಅನ್ನು ಬೈಪಾಸ್ ಮಾಡಿ, ಭೂ ಹಂಚಿಕೆಯನ್ನು ನಿಯಂತ್ರಿಸುವ ಕಾನೂನು ಕಾರ್ಯವಿಧಾನಗಳನ್ನು ಉಲ್ಲಂಘಿಸಿ, ಜಮೀನನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ. ಪುಟುಲ್ ಮತ್ತು ಅವರ ಕುಟುಂಬವು ಈಗಾಗಲೇ ಢಾಕಾದಲ್ಲಿ ಆಸ್ತಿಗಳನ್ನು ಹೊಂದಿದೆ ಎಂದು ACC ಹೇಳಿಕೊಂಡಿದೆ. ಪ್ರಸ್ತುತ ನವದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪುಟುಲ್ ಅವರನ್ನು ಸಹ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ.
ಈ ಪ್ರಕರಣದ ಜೊತೆಗೆ, ಬಾಂಗ್ಲಾದೇಶದ ಸ್ಥಾಪಕ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಅವರ 100ನೇ ಹುಟ್ಟುಹಬ್ಬದಂದು 2020ರಲ್ಲಿ ನಡೆದ “ಮುಜಿಬ್ ಶತಮಾನೋತ್ಸವ” ಆಚರಣೆಯ ಸಂದರ್ಭದಲ್ಲಿ 4,000 ಕೋಟಿ ದುರುಪಯೋಗದ ಬಗ್ಗೆ ACC ಇತ್ತೀಚೆಗೆ ತನಿಖೆಯನ್ನು ಪ್ರಾರಂಭಿಸಿತು. ಶೇಖ್ ಹಸೀನಾ ಮತ್ತು ಅವರ ಸಹೋದರಿ ಶೇಖ್ ರೆಹನಾ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಕಮಲ್ ಅಬ್ದುಲ್ ನಾಸರ್ ಚೌಧರಿ ಅವರ ಖರ್ಚು ವೆಚ್ಚದಲ್ಲಿ ಅವರ ಪಾತ್ರಕ್ಕಾಗಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಶೇಖ್ ಹಸೀನಾ ಭಾಷಣಕ್ಕೂ ಭಾರತಕ್ಕೂ ಸಂಬಂಧವಿಲ್ಲ; ಬಾಂಗ್ಲಾದೇಶ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿ
16 ವರ್ಷಗಳ ಕಾಲ ಆಳಿದ ಶೇಖ್ ಹಸೀನಾ ಅವರ ಸರ್ಕಾರವನ್ನು ವಿದ್ಯಾರ್ಥಿಗಳ ನೇತೃತ್ವದ ದಂಗೆಯ ನಂತರ ಆಗಸ್ಟ್ 2024ರಲ್ಲಿ ಪದಚ್ಯುತಗೊಳಿಸಲಾಯಿತು. ಅಂದಿನಿಂದ 77 ವರ್ಷದ ಶೇಖ್ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಅವರನ್ನು ಹಸ್ತಾಂತರಿಸುವಂತೆ ಕೋರಿದೆ. ಆದರೆ ಭಾರತ ಸರ್ಕಾರ ಇನ್ನೂ ಆ ವಿನಂತಿಗೆ ಸ್ಪಂದಿಸಿಲ್ಲ.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ನಡೆಸುತ್ತಿರುವ ಸಾಮೂಹಿಕ ಹತ್ಯೆ ಮತ್ತು ಬಲವಂತದ ಕಣ್ಮರೆಗಳು ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಆರೋಪಗಳನ್ನು ಶೇಖ್ ಹಸೀನಾ ಎದುರಿಸುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ